ಸಮಗ್ರ ನ್ಯೂಸ್: ‘ಕಾಶ್ಮೀರ್ ಫೈಲ್ಸ್’ ಹಾಗೂ ‘ಕೇರಳ ಸ್ಟೋರಿ’ ನಂತರ ಈಗ ಅದೇ ಹಾದಿಯಲ್ಲಿ ಕರಾವಳಿ ಸ್ಟೋರಿಯೊಂದು ಬಿಡುಗಡೆಯಾಗಲಿದೆ. ಈ ಕರಾವಳಿ ಸ್ಟೋರಿಯ ಸಿನಿಮಾ ಹೆಸರು ‘ಬೇರ’. ‘ಬೇರ’ ಎಂದರೆ ತುಳುವಿನಲ್ಲಿ ವ್ಯಾಪಾರ ಎಂದರ್ಥ. ದಕ್ಷಿಣ ಕನ್ನಡ ಜಿಲ್ಲೆ ಕಲ್ಲಡ್ಕದಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಹಿಂದೂ, ಮುಸ್ಲಿಂ ಘರ್ಷಣೆಯ ಕತೆ ಹೊಂದಿದೆ.
‘ಕಾಶ್ಮೀರ್ ಫೈಲ್ಸ್’, ‘ಕೇರಳ ಸ್ಟೋರಿ’ ಕ್ರಮವಾಗಿ ಕಾಶ್ಮೀರ ಮತ್ತು ಕೇರಳದ ವಾಸ್ತವ ಕತೆಯುಳ್ಳ ಸಿನಿಮಾಗಳು ಎಂಬ ಪ್ರತಿಪಾದನೆ ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಕರ್ನಾಟಕ ಕರಾವಳಿಯ ಕೋಮು ಸಂಘರ್ಷದ ಕತೆ ಆಧರಿತ ಸಿನಿಮಾ ಬರುತ್ತಿರುವುದು ಗಮನಾರ್ಹ.
ಖ್ಯಾತ ಕಿರುತೆರೆ ನಿರ್ದೇಶಕ ವಿನು ಬಳಂಜ ಈ ಸಿನಿಮಾ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ‘ಮರ್ಚೆಂಟ್ ಆಫ್ ಡೆತ್’ ಎಂಬ ಟ್ಯಾಗ್‌ಲೈನ್ ಇದೆ. ಹಿಂದು, ಮುಸ್ಲಿಂ ಧರ್ಮದ ಅಮಾಯಕ ತರುಣರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ವ್ಯಕ್ತಿಗಳ ಕುರಿತ ಸಿನಿಮಾ ಎನ್ನಲಾಗಿದೆ. ಇದರಲ್ಲಿ ಹಿಂದೂ, ಮುಸ್ಲಿಂ ಯುವಕರ ಸಾವನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸುವ ನಾಯಕತ್ವದ ಕುರಿತ ಚಿತ್ರಣವೂ ಇದೆ ಎಂದು ಮೂಲಗಳು ತಿಳಿಸಿವೆ. ಇದೆಲ್ಲದರ ಜೊತೆಗೆ ಉಗ್ರವಾದದ ಎಳೆಯೂ ಚಿತ್ರದಲ್ಲಿ ಬಂದಿದೆ ಎನ್ನಲಾಗಿದೆ.
ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ವಿನು ಬಳಂಜ, ‘ಯಾರ ಮನೆಯ ಮಕ್ಕಳೂ ಸಾಯಬಾರದು ಎಂಬ ಉದ್ದೇಶ ಈ ಚಿತ್ರದ್ದು’ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಹಿನ್ನೆಲೆಯಲ್ಲಿ ಧರ್ಮಗಳನ್ನು ಬಳಸಿಕೊಂಡು ಮುಗ್ಧರನ್ನು ಬಲಿ ತೆಗೆದುಕೊಳ್ಳುವ ಜನರ ವಿರುದ್ಧದ ಕತೆಯನ್ನು ಈ ಸಿನಿಮಾ ಒಳಗೊಂಡಿರುವ ಸಾಧ್ಯತೆ ಇದೆ.
ಅಲ್ಲದೇ ಕಲ್ಲಡ್ಕದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ನಡೆಸುತ್ತಿರುವ ಮ್ಯೂಸಿಯಂನಲ್ಲಿ ಚಿತ್ರೀಕರಣ ನಡೆಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ‘ಬೇರ’ ಸಿನಿಮಾ ಕುತೂಹಲ ಕೆರಳಿಸಿದೆ. ಉದ್ಯಮಿ ದಿವಾಕರ್ ದಾಸ್ ನೇರ್ಲಾಜೆ ಈ ಸಿನಿಮಾದ ನಿರ್ಮಾಪಕರು.