ಸಮಗ್ರ ನ್ಯೂಸ್: ಮಣಿಪುರದಲ್ಲಿ ಮತ್ತೆ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಕಳೆದ 24 ಗಂಟೆಗಳಲ್ಲಿ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ. ಹಿಂಸಾಚಾರದ ಬೆನ್ನಲ್ಲೇ ಸೇನಾ ತುಕಡಿಗಳ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವ ಜಿಲ್ಲೆಗಳಲ್ಲಿ ಗುಂಡು ನಿರೋಧಕ ವಾಹನಗಳಲ್ಲಿ ಸೇನೆ, ಕ್ಷೇತ್ರ ಪ್ರಾಬಲ್ಯ ಕಾರ್ಯಾಚರಣೇ ನಡೆಸಿದೆ.
ಮೇ 3 ರಿಂದ ನಡೆಯುತ್ತಿರುವ ಹಿಂಸಾಕೃತ್ಯಗಳ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭೇಟಿಯ ಮುನ್ನಾದಿನ ಮೀಟಿ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬರು ಇಂಫಾಲ ಪೂರ್ವ ಜಿಲ್ಲೆಯ ವಖಂನ್‌ಪಾಯಿ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.
ಘಟನೆಯಲ್ಲಿ ಮತ್ತೊಬ್ಬ ನಾಗರಿಕರು ಗಾಯಗೊಂಡಿದ್ದಾರೆ. ಇಂಫಾಲ ಪೂರ್ವ ಮತ್ತು ಕಕ್‌ಚಿಂಗ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಹಿಂಸಾಕೃತ್ಯಗಳಲ್ಲಿ ಇಬ್ಬರು ಪೊಲೀಸರು ಮತ್ತು ಒಬ್ಬ ಶಂಕಿತ ಉಗ್ರ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಸಶಸ್ತ್ರ ಉಗ್ರಗಾಮಿಗಳ ವಿರುದ್ಧ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಸಂಖ್ಯೆ 33ಕ್ಕೇರಿದೆ. ಏತನ್ಮಧ್ಯೆ ಭದ್ರತಾ ಪಡೆಗಳು 25 ಮಂದಿ ಕಿಡಿಗೇಡಿಗಳನ್ನು ಶಸ್ತ್ರಸಹಿತ ಬಂಧಿಸಿದ್ದಾರೆ. ಸೋಮವಾರ ತಡರಾತ್ರಿ ಇಂಫಾಲ ಪಶ್ಚಿಮ ಜಿಲ್ಲೆಯ ಖುರ್ಖೂಲ್ ಎಂಬಲ್ಲಿ ಪೊಲೀಸರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.