ಸಮಗ್ರ ನ್ಯೂಸ್: ಕೆಲಸ ಮುಗಿಸಿಕೊಂಡು ಮನೆಯತ್ತ ಹೊರಟ ಉದ್ಯೋಗಿಯ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಗ್ರಾಮದಲ್ಲಿ ಮತ್ತೆ ಕಾಡಾನೆ ದಾಳಿ ನಡೆದಿದೆ. ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರವಾಸಿಗರಿಗೂ ಎಚ್ಚರದಿಂದ ಹೋಗುವಂತೆ ಗಾಯಾಳು ಮನವಿ ಮಾಡಿದ್ದಾರೆ.
ಕಾಡಾನೆಗಳ ದಾಳಿಯಿಂದ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ವಿಜುಕುಮಾರ್ ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿಯ ನಡುಮನೆ ಕ್ರಾಸ್ ಬಳಿ ಘಟನೆ ನಡೆದಿದೆ. ಪ್ರತಿನಿತ್ಯದಂತೆ ಭಾನುವಾರ ಕೂಡ ಕೆಲಸ ಮುಗಿಸಿಕೊಂಡು ಊರಿನತ್ತ ಹೋಗುವಾಗ ಕಾಡಾನೆ ಬಂದು ದಾಳಿ ಮಾಡಿದೆ. ಈ ವೇಳೆ ಆನೆ ಏಕಾಏಕಿ ದಾಳಿ ಮಾಡಿದ್ದು, ರಸ್ತೆ ಬದಿಯ ಕಂದಕಕ್ಕೆ ಬಿದ್ದು ವಿಜುಕುಮಾರ್ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ರಸ್ತೆ ಬದಿಯಲ್ಲಿ ವಾಹನ ಇದ್ದರೂ ಅದರ ಮಾಲೀಕ ಕಾಣಿಸದೇ ರಸ್ತೆಹೋಕರು ಹುಡುಕಿದಾಗ ಗಾಯಗೊಂಡು ನರಳುತ್ತಿದ್ದ ವಿಜುಕುಮಾರ್ ಅವರನ್ನು ನೋಡಿದ್ದಾರೆ.
ಗಂಭೀರ ಗಾಯಗೊಂಡ ವಿಜುಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಡಬದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಪುತ್ತೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಕಾಡಾನೆ ದಾಳಿ ಮಾಡಿದೆ. ಕಡಬ ಬಳಿಯ ಇಚ್ಲಂಪಾಡಿಯ ಪರಿಸರದಲಲ್ಲಿ ಒಟ್ಟು 2 ಆನೆಗಳು ಇರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಲಭ್ಯವಾಗಿದೆ. ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ. ಜೊತೆಗೆ, ಸುಬ್ರಹ್ಮಣ್ಯ-ಧರ್ಮಸ್ಥಳ ತೆರಳುವ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಗಾಯಾಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ.