ಸಮಗ್ರ ನ್ಯೂಸ್: ಕರ್ನಾಟಕದ ಶಾಸಕರಿಗೆ ಪ್ರತಿ ತಿಂಗಳು ದೂರವಾಣಿ ಭತ್ಯೆ ಎಂದು 20 ಸಾವಿರ ರುಪಾಯಿ ಕೊಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಅಶೋಕ್ ಕೆ ಎನ್ನುವರು ಟ್ವೀಟ್ ಮಾಡಿದ್ದು, “ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ, 700 ರೂಪಾಯಿ ರಿಚಾರ್ಜ್ ಮಾಡಿಸಿದರೆ ಎರಡು ತಿಂಗಳು ಪ್ರತಿದಿನ 3 ಜಿಬಿ ಡಾಟಾ ದೊಂದಿಗೆ ಹಗಲು ರಾತ್ರಿ ಮಾತನಾಡಿದರು ಖಾಲಿಯಾಗದ ಔಟ್ ಗೋಯಿಂಗ್ ಇರುವಾಗ ಈ ಶಾಸಕರಿಗ್ಯಾಕೆ ದೂರವಾಣಿ ವೆಚ್ಚ ತಿಂಗಳಿಗೆ 20000? ಅಂಚೆ ವೆಚ್ಚ 5000 ಯಾಕೆ?” ಎಂದು ಪ್ರಶ್ನೆ ಮಾಡಿದ್ದಾರೆ.
ಈ ವೆಚ್ಚಕ್ಕೆ ಕಡಿವಾಣ ಹಾಕಿದರೆ ಬಡವರಿಗೆ ಪ್ರತಿ ತಿಂಗಳು 11 ಮನೆ ನಿರ್ಮಾಣ ಮಾಡಿಕೊಡಬಹುದು ಎಂದು ಅವರು ಸಲಹೆ ನೀಡಿದ್ದಾರೆ. “ಈ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಈ ಒಂದು ದಿಟ್ಟ ಹೆಜ್ಜೆ ನೀವು ಇಟ್ಟಿದ್ದೆ ಆದ್ರೆ ಪ್ರತಿ ತಿಂಗಳು 56 ಲಕ್ಷ ಉಳಿಸಬಹುದು. ಒಂದು ಅಂದಾಜಿನ ಪ್ರಕಾರ ಹಳ್ಳಿಗಳಲ್ಲಿ 5 ಲಕ್ಷ ರೂಪಾಯಿಗಳಲ್ಲಿ ಒಂದು ಮನೆ ನಿರ್ಮಾಣವಾಗುತ್ತದೆ.
ಅಂದರೆ 56 ಲಕ್ಷ ಶಾಸಕರಿಗೆ ಕೊಡುವ ದೂರವಾಣಿ ಮತ್ತು ಅಂಚೆ ವೆಚ್ಚದಲ್ಲಿ ಬಡವರಿಗೆ ಪ್ರತಿ ತಿಂಗಳು 11 ಮನೆ ನಿರ್ಮಾಣ ಮಾಡಬಹುದು. ದಯವಿಟ್ಟು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ. ಬದಲಾವಣೆ ನಿಮ್ಮಿಂದಲೇ ಶುರುವಾಗಲಿ.” ಎಂದು ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ.
ಕರ್ನಾಟಕ ಶಾಸಕರ ವೇತನ ಎಷ್ಟು ಗೊತ್ತಾ?
ಏಪ್ರಿಲ್ 1, 2022ರಲ್ಲಿ ಶಾಸಕರ ವೇತನವನ್ನು ಶೇಕಡ 50 ರಷ್ಟು ಹೆಚ್ಚಿಸಲಾಗಿದೆ. ದಾಖಲೆಯ ಪ್ರಕಾರ ಒಬ್ಬ ಶಾಸಕರಿಗೆ 2.05 ಲಕ್ಷ ರುಪಾಯಿಗಳಷ್ಟು ವೇತನ ಸಿಗುತ್ತದೆ. ಇದರಲ್ಲಿ ಮೂಲ ವೇತನ 40,000 ರುಪಾಯಿ, ಕ್ಷೇತ್ರ ಭತ್ಯೆ 60,000 ರುಪಾಯಿ, ಕ್ಷೇತ್ರ ಪ್ರಯಾಣ ಭತ್ಯೆ 60,000 ರುಪಾಯಿ, 20,000 ರುಪಾಯಿ ಆಪ್ತ ಸಹಾಯಕರಿಗೆ ವೇತನ, ಅಂಚೆ ವೆಚ್ಚ 5,000 ರುಪಾಯಿ ಮತ್ತು ಫೋನ್ ಭತ್ಯೆ 20,000 ರುಪಾಯಿ ನೀಡಲಾಗುತ್ತದೆ.