ಸಮಗ್ರ ನ್ಯೂಸ್: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗೆ ಕಾಂಗ್ರೆಸ್ ಮುಂದಾಗಿದ್ದು ಮೊದಲ ಎಫ್‌ಐಆರ್ ದಾಖಲಾಗಿದೆ. ಅಂಬೇಡ್ಕರ್ ಅಭಿವೃದ್ದಿ ನಿಗಮ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಶೀಘ್ರವೇ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ.
2 ರಿಂದ 5 ಎಕರೆ ವ್ಯಾಪ್ತಿಯೊಳಗಡೆ ಜಮೀನಿರುವವರಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನಿರ್ಮಾಣ ಮಾಡುವ ಮೂಲಕ ಅವರಿಗೆ ನೆರವಾಗುವ ಕೆಲಸ ಮಾಡಲಾಗುತ್ತಿದೆ. ಆದರೆ ಈ ಯೋಜನೆಯನ್ನು ದುರುಪಯೋಗ ಮಾಡಿಕೊಂಡು ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ಹಣ ಕಬಳಿಸಿದ್ದಾರೆ. ನಕಲಿ ದಾಖಲೆ ನೀಡಿ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿಲಾಗಿದೆ.
ಈ ಹಿಂದೆ 2021 ರಲ್ಲಿ ಗಂಗಾ ಕಲ್ಯಾಣ ಯೋಜನೆ ಅಕ್ರಮ ತಡೆಯಲು ಸದನ ಸಮಿತಿ ರಚನೆಯಾಗಿತ್ತು. ಡಾ.ವೈ.ಎ. ನಾರಾಯಣ ಸ್ವಾಮಿ ನೇತೃತ್ವದ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿ ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿದೆ. ಈ ಬೆನ್ನಲ್ಲೇ ಗಂಗಾಕಲ್ಯಾಣ ಯೋಜನೆಯ ಅಕ್ರಮದ ತನಿಖೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ನಿರ್ಮಾಣ ಕಾರ್ಯದಲ್ಲಿ ಶೇ.30 ರಿಂದ 40 ರಷ್ಟು ಅಕ್ರಮ ನಡೆದಿದೆ. 100 ಕೋಟಿ ರೂ. ಅನುದಾನದಲ್ಲಿ 30ರಿಂದ 40 ಕೋಟಿ ರೂ. ದೋಚುವ ಕೆಲಸ ಮಾಡಲಾಗಿದೆ ಡಾ.ವೈ.ಎ. ನಾರಾಯಣಸ್ವಾಮಿ ಈ ಹಿಂದೆ ಹೇಳಿದ್ದರು. 2015ರಿಂದ ಕೋಟ್ಯಂತರ ರೂ. ಅಕ್ರಮ ನಡೆದಿರುವುದು ಸಮಿತಿಗೆ ಗೊತ್ತಾಗಿದೆ. ಗೋಲ್‌ಮಾಲ್‌ನಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಲಿದೆ ಎಂದು ತಿಳಿಸಿದ್ದರು.