ಮಂಡ್ಯ: ಕುಟುಂಬ ರಾಜಕಾರಣದ ಬಗ್ಗೆ ಆಗಾಗ ಮಾತನಾಡುತ್ತಿರುವ ರಾಜ್ಯ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕೆಆರ್‌ಪೇಟೆಯಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ಗೆ ಫುಡ್‌ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕೆ., ವಿಶ್ವನಾಥ್ ಗೆ ಯಾವ ಪಕ್ಷದಲ್ಲೂ ಸರಿಯಾಗಿ ಇರೋಕೆ ಆಗಲ್ಲ. ವಿಶ್ವನಾಥ್ ಮಗ ಜಿ.ಪಂ. ಸದಸ್ಯ ಅಲ್ವಾ, ವಿಶ್ವನಾಥ್ ಮಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಲ್ವಾ. ಅದು ಕುಟಂಬ ರಾಜಕೀಯ ಅಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಶ್ವನಾಥ್ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ವಿಶ್ವನಾಥ್ ಅವರಿಗೆ ಯಾವ ಪಕ್ಷದಲ್ಲೂ ಸರಿಯಾಗಿ ಇರೋಕೆ ಆಗಲ್ಲ. ಅವರಿಗೆ ಬೇಕಿರೋದು ಅಧಿಕಾರ ಹಾಗೂ ದುಡ್ಡು. ಅದು ಸಿಗದೇ ಇರುವಾಗ ಎಲ್ಲರನ್ನೂ ಬೈಕೊಂಡು ಓಡಾಡುವ ಬುದ್ಧಿ ಅವರದ್ದು. ನರಿಗೆ ದ್ರಾಕ್ಷಿ ಎಟಕದೇ ಇರುವಾಗ ಹುಳಿ ಎನ್ನುತ್ತದೆ ಅಲ್ವಾ, ಆ ಜಾಯಮಾನಕ್ಕೆ ವಿಶ್ವನಾಥ್ ಸೇರಿದ್ದಾರೆ ಎಂದು ಕಿಡಿಕಾರಿದರು.
ವಿಶ್ವನಾಥ್‌ಗೆ ಜೆಡಿಎಸ್ ಅಭ್ಯರ್ಥಿ ಆಗುವ ಮುನ್ನ ಕುಟುಂಬ ರಾಜಕೀಯ ಇದೆ ಎಂದು ಗೊತ್ತಿರಲಿಲ್ವಾ. ಇಡೀ ಜೆಡಿಎಸ್ ಪಕ್ಷವೇ ದೇವೇಗೌಡರ ಕುಟುಂಬ. ಇದು ನಾವು ಅಂದುಕೊಂಡಿರುವ ಕುಟುಂಬ, ವಿಶ್ವನಾಥ್ ಅಂದುಕೊಂಡಿರುವ ಕುಟುಂಬವೇ ಬೇರೆ ಎಂದಿದ್ದಾರೆ.