ಸಮಗ್ರ ನ್ಯೂಸ್: ಸಿಎಂ ಸೇರಿದಂತೆ ಸರ್ಕಾರದ ಸಚಿವರು ಪ್ರಯಾಣಿಸುವಾಗ ವಾಹನ ದಟ್ಟಣೆಯಿಂದ ಆಗುವ ಕಿರಿಕಿರಿ ತಪ್ಪಿಸಲು ಝೀರೋ ಟ್ರಾಫಿಕ್ ಪಡೆಯುತ್ತಿದ್ದರು. ಆದರೆ,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಈ ಝೀರೋ ಟ್ರಾಫಿಕ್ ಬೇಡ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರಿಗೆ ತಿಳಿಸಿದ್ದರು.
ಈ ಕುರಿತು ಸ್ವತಃ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಸನ್ಮಾನ ರೂಪದಲ್ಲಿ ಶಾಲು-ಶಲ್ಯಗಳನ್ನು ನೀಡಬೇಡಿ, ಅದರ ಬದಲು ಪುಸ್ತಕಗಳನ್ನು ನೀಡಿ ಎಂದು ನೂತನ ಸಿಎಂ ಸಿದ್ದರಾಮಯ್ಯ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ. ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯ.ʼ ಎಂದು ಅವರು ಹೇಳಿದ್ದಾರೆ.