ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಹಿಳಾ ಕಂಡಕ್ಟರ್ ಬೆಂಗಳೂರು-ಚಿಕ್ಕಮಗಳೂರು ಮಾರ್ಗದಲ್ಲಿ ಚಲಿಸುವ ಬಸ್‌ನಲ್ಲಿ ಮಹಿಳಾ ಕಂಡೆಕ್ಟರ್ ತುಂಬು ಗರ್ಭಿಣಿ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದರು.
ಸೋಮವಾರ (ಮೇ. 15) ಮಧ್ಯಾಹ್ನ 1.25ರ ಸುಮಾರಿಗೆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಈ ಘಟನೆ ನಡೆದಿದೆ. ಮಹಿಳಾ ಕಂಡಕ್ಟರ್ ಎಸ್.ವಸಂತಮ್ಮ, ಚಾಲಕನಿಗೆ ಬಸ್ ನಿಲ್ಲಿಸುವಂತೆ ಹೇಳಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲು ಹೇಳಿದರು. ಸೋಮವಾರ ಮಹಿಳೆಗೆ ಹೆರಿಗೆಯಾಗಿದ್ದು, ತಾಯಿ(ಫಾತಿಮಾ) ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಅಷ್ಟೇ ಅಲ್ಲ, ಮಹಿಳೆ ಆರ್ಥಿಕವಾಗಿ ಕಷ್ಟದಲ್ಲಿದ್ದ ಕಾರಣ ಬಸ್ಸಿನ ಸಿಬ್ಬಂದಿ 1500 ರೂಪಾಯಿ ಸಂಗ್ರಹಿಸಿ ತುರ್ತು ಸಹಾಯಕ್ಕಾಗಿ ನೀಡಿದ್ದರು. ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ರವಾನಿಸಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಹಿಳೆ ಮತ್ತು ಆಕೆಯ ಮಗುವಿನೊಂದಿಗೆ ಕಂಡಕ್ಟರ್‌ನ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಐಎಎಸ್ ಅವರು ಮಹಿಳಾ ಕಂಡಕ್ಟರ್‌ರ ಸಮಯೋಚಿತ ಸಹಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಗರ್ಭಿಣಿಯ ಅಗತ್ಯಗಳಿಗೆ ಸ್ಪಂದಿಸುವ ಜೊತೆಗೆ ಮಗು ಮತ್ತು ತಾಯಿಯ ಜೀವ ಉಳಿಸುವಲ್ಲಿ ಮಹಿಳಾ ಕಂಡಕ್ಟರ್ ಅವರ ಸಮಯೋಚಿತ ಮಾನವೀಯ ಸೇವೆಯು ಅತ್ಯಂತ ಶ್ಲಾಘನೀಯವಾಗಿದೆ. ಮಹಿಳಾ ಕಂಡಕ್ಟರ್ ಮಾಡಿದ ಈ ಸಹಾಯವನ್ನು ಶ್ಲಾಘಿಸುತ್ತೇವೆ’ ಎಂದು ಜಿ ಸತ್ಯವತಿ, ಐಎಎಸ್ ತಿಳಿಸಿದರು.