ಸಮಗ್ರ ನ್ಯೂಸ್: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಮುಂದಿನ ಸಿಎಂ ಆಯ್ಕೆ ಬಗ್ಗೆ ಕುತೂಹಲ ಜೋರಾಗಿದ್ದು ಇದೀಗ ಈ ಎಲ್ಲಾ ಕುತೂಹಲಗಳಿಗೆ ತೆರೆ ಬಿದ್ದಿದೆ.
ರಾಜ್ಯದ ಮುಂದಿನ ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆಯಾಗೋದು ಬಹುತೇಕ ಪಕ್ಕಾ ಆಗಿದ್ದು ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ ಹೊರಡಿಸುವುದೊಂದೇ ಬಾಕಿ ಉಳಿದಿದೆ.
ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರು. ಸಿಎಂ ರೇಸ್ನಲ್ಲಿದ್ದ ಡಿ.ಕೆ ಶಿವಕುಮಾರ್ ಕೂಡ ದೆಹಲಿಗೆ ತೆರಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಹೊಟ್ಟೆ ನೋವು ಎಂಬ ನೆಪವೊಡ್ಡಿದ ಡಿಕೆಶಿ ದೆಹಲಿ ಪ್ರವಾಸ ಕೈಬಿಟ್ಟಿದ್ದರು.
ಡಿಕೆಶಿಯ ಈ ನಡೆ ಅನುಮಾನಕ್ಕೆ ಕಾರಣವಾಗಿತ್ತು. ಇದೀಗ ಉನ್ನತ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸೋದು ಪಕ್ಕಾ ಆಗಿದೆ.
ಸಿದ್ದರಾಮಯ್ಯ ಐದು ವರ್ಷಗಳವರೆಗೆ ಸಿಎಂ ಆಗಿರುತ್ತಾರೋ ಅಥವಾ ಎರಡೂವರೆ ವರ್ಷದ ಬಳಿಕ ಸಿಎಂ ಕುರ್ಚಿಯನ್ನು ಡಿಕೆಶಿಗೆ ಬಿಟ್ಟುಕೊಡ್ತಾರೋ ಎಂಬ ಕುತೂಹಲ ಇನ್ನೂ ಹಾಗೇ ಉಳಿದಿದೆ. ಡಿಕೆಶಿ ಕೂಡ ನನಗೆ ತಾಳ್ಮೆ ಇದೆ, ಹೋರಾಟದ ಛಲ ಇದೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಎರಡೂವರೆ ವರ್ಷಗಳವರೆಗೆ ಡಿಕೆಶಿ ಸಿಎಂ ಕುರ್ಚಿಗಾಗಿ ಕಾಯಬಹುದು ಎಂಬ ಅನುಮಾನ ಮೂಡಿದೆ.