ಸುಳ್ಯ : ನೆಟ್ವರ್ಕ್ ಸಮಸ್ಯೆಯಿಂದ ಗುತ್ತಿಗಾರು ಗ್ರಾಮದ ಮೊಗ್ರ, ಬಳ್ಳಕ್ಕ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮಳೆಯ ನಡುವೆಯೇ ರಸ್ತೆ ಬದಿಗೆ ತಂದೆಯ ಜೊತೆಗೆ ಬಂದು ಕೊಡೆ ಹಿಡಿದು ಆನ್ ಲೈನ್ ಕ್ಲಾಸ್ ಗೆ ಹಾಜರಾಗುತ್ತಿರುವುದು ಹಲವು ದಿನಗಳಿಂದ ನಡೆಯುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ಹಿಡಿದ ಕೈಗನ್ನಡಿ. ಎಸ್ ಎಸ್ ಎಲ್ ಸಿ. ವಿದ್ಯಾರ್ಥಿನಿಯಾಗಿರುವ ಈಕೆ ನೆಟ್ವರ್ಕ್ ಇಲ್ಲ, ಸಿಗ್ನಲ್ ಇಲ್ಲ ಎಂದು ಕೂತರೆ ಈಡೀ ಭವಿಷ್ಯವೇ ಹಾಳಾಗುತ್ತದೆ ಎಂದು ರಸ್ತೆ ಬದಿ ನೆಟ್ವರ್ಕ್ ಹುಡುಕಿ ಆನ್ ಲೈನ್ ಪಾಠ ಕೇಳಿರುವ ಫೋಟೋ ವೈರಲ್ ಅಗಿದೆ. ಮೊದಲೇ ಕೊರೋನಾ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದೆ. ಈಗ ನೆಟ್ವರ್ಕ್ ಇಲ್ಲ, ಸಿಗ್ನಲ್ ಇಲ್ಲ ಎಂದು ಕೂತರೆ ಇಡೀ ಭವಿಷ್ಯದ ಚಿಂತೆ.
ಹಾಗಾಗಿಯೇ ಆ ವಿದ್ಯಾರ್ಥಿನಿ ತಂದೆಯ ಜೊತೆಗೆ ರಸ್ತೆ ಬಂದು ಮಳೆಯ ನಡುವೆಯೇ ಪಾಠ ಕೇಳುತ್ತಾಳೆ, ಓದಲು ಬೇಕಾದ ಪಠ್ಯವನ್ನು ಡೌನ್ ಲೋಡ್ ಮಾಡುತ್ತಾಳೆ. ಈ ಭಾಗದ ಸುಮಾರು 20 ಮಕ್ಕಳು ಹೀಗೇ ಪಾಠ ಕೇಳಲು ಗುಡ್ಡದ ತುದಿಗೆ ರಸ್ತೆಯ ಬದಿಗೆ ಬರುತ್ತಾರೆ. ನೆಟ್ವರ್ಕ್ ಕೊರತೆ ಜೊತೆಗೆ ಆನ್ ಲೈನ್ ತರಗತಿ ಈ ಭಾಗದ ವಿದ್ಯಾರ್ಥಿಗಳಿಗೆ ತಲೆನೋವಾಗಿದೆ. ಸರಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ಟವರ್, ವಿನಿಮಯ ಕೇಂದ್ರಗಳಿಗೆ ಇಂದಿಗೂ ಸರಿಯಾಗಿ ಡೀಸೆಲ್ ಪೂರೈಕೆ ಆಗುತ್ತಿಲ್ಲ, ಬ್ಯಾಟರಿ, ಪವರ್ ಪ್ಲಾಂಟ್ ಸರಿ ಇಲ್ಲ. ವ್ಯವಸ್ಥಿತ ರೀತಿಯಲ್ಲಿ ವಿದ್ಯುತ್ ಸರಬರಾಜು ಕೂಡಾ ಇಲ್ಲ. ನೆಟ್ವರ್ಕಿಂಗ್ ವ್ಯವಸ್ಥೆ ಇನ್ನೂ ಸರಿ ಇಲ್ಲ. ಯಾವುದೇ ವಿನಿಮಯ ಕೇಂದ್ರ ಆಫ್ ಆದಾಗ ಇಡೀ ವ್ಯವಸ್ಥೆ ಹದಗೆಡುತ್ತದೆ, ಬಹುದೊಡ್ಡ ಕೇಬಲ್ ಜಾಲ ಹೊಂದಿರುವ ಬಿ ಎಸ್ ಎನ್ ಎಲ್ ನೆಟ್ವರ್ಕಿಂಗ್ ಸಮಸ್ಯೆ ಇನ್ನೂ ಇದೆ.
ತಾಂತ್ರಿಕವಾಗಿ ಬಹಳ ಹಿಂದಿದ್ದು ಬಿಎಸ್ ಎನ್ಎಲ್ ನಂಬಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕಳೆದ ಬಾರಿ ಬಾಳುಗೋಡು ಭಾಗದ ವಿದ್ಯಾರ್ಥಿಗಳು ನೆಟ್ವರ್ಕ್ ಗಾಗಿ ಮರ ಏರಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸುಳ್ಯ ತಾಲೂಕಿನ ಹಲವು ಕಡೆ ಈ ನೆಟ್ವರ್ಕ್ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದ ಜನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪ್ರತಿ ಗ್ರಾಮದಿಂದ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಕೂಡ ಜನಪ್ರತಿನಿಧಿಗಳಿಗೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಬರೆದ ಈ ಸಮಸ್ಯೆಗಳು ಹಲವು ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಆದರೂ ಈ ಸಮಸ್ಯೆ ಬಗೆಹರಿಯಲೇ ಇಲ್ಲ.
ನಿಮಗೇನು ಗೊತ್ತು ಸರ್ ನಿಮ್ಮ ಮೊಬೈಲ್ ಗೆ ನೆಟ್ವರ್ಕ್ ಇದೆ. ಪಾಪ ಈ ವಿದ್ಯಾರ್ಥಿಗಳ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಅವರು ನೀಡಿದ ಮನವಿಗೆ ಸ್ಪಂದಿಸಿ. ಇದು ಅವರ ಭವಿಷ್ಯದ ಪ್ರಶ್ನೆ. ಇಂದು ನಡೆವುವ ಪ್ರತಿ ತರಗತಿಗಳು ಅವರಿಗೆ ಅಗತ್ಯ. ನಾಳೆ ಅನುತ್ತೀರ್ಣ ವಾದರೆ ಯಾರು ಹೊಣೆ?. ಇನ್ನಾದರೂ ಇದಕ್ಕೆ ಸಂಬಂಧ ಪಟ್ಟವರು ಬದಲಿಗೆ ವ್ಯವಸ್ಥೆ ಕಲ್ಪಿಸಿ ಕೊಡಿ.
ಇನ್ನು ಈ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಜನಪ್ರತಿನಿಧಿಗಳ ಕಾಲು ಹಿಡಿಯುದೊಂದೇ ಬಾಕಿ.