ಸಮಗ್ರ ನ್ಯೂಸ್: ನೆತ್ತಿಯ ಮೇಲೆ ಕೆಂಡ ಕಾರುವ ಸೂರ್ಯನ ಬಿಸಿಯ ಝಳದಿಂದ ಮುಕ್ತಿ ಕೊಡುವ ಹಣ್ಣು ಕಲ್ಲಂಗಡಿ ಬಿಸಿಲು ಎಂದಾಕ್ಷಣ ಮೊದಲು ನೆನಪಾಗುತ್ತದೆ. ಎಲ್ಲೆಡೆ ಸಿಗುವ ಕಲ್ಲಂಗಡಿ ಹಣ್ಣು ಕೆಲವೊಮ್ಮೆ ಸಿಹಿಯೇ ಇರದೇ ನಿರಾಶೆ ಮೂಡಿಸುತ್ತದೆ. ಅದಕ್ಕಾಗಿ ಅಂಗಡಿಯಿಂದ ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಯಾವೆಲ್ಲ ಅಂಶದ ಬಗ್ಗೆ ಗಮನಹರಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಕಡಿಮೆ ಹಣದಲ್ಲಿ ಖರೀದಿಸಬಹುದು ಅಥವಾ ಅಷ್ಟು ದೊಡ್ಡ ಹಣ್ಣು ಯಾರು ಹೊರ್ತಾರೆ ಅಂತಾ ಅನೇಕರು ಸಣ್ಣ ಕಲ್ಲಂಗಡಿಯ ಖರೀದಿ ಮಾಡುತ್ತಾರೆ. ಇದು ನಾವು ಮಾಡುವ ಮೊದಲನೇ ತಪ್ಪು. ನೀರು ಹೆಚ್ಚಿರುವ ದೊಡ್ಡ ಹಣ್ಣನ್ನೇ ಆಯ್ಕೆ ಮಾಡಿ ಹಳದಿ ಗುರುತು ಹೊಂದಿರುವ ಕಲ್ಲಂಗಡಿ ಹಣ್ಣುಗಳನ್ನು ಖರೀದಿಸಿ.
ಕಲ್ಲಂಗಡಿ ಹಣ್ಣನ್ನು ಮೆಲ್ಲಗೆ ಬಡಿದಾಗ ಅದರಿಂದ ಆಳವಾದ ಶಬ್ದ ಹೊರಬಂದರೆ ಆ ಹಣ್ಣು ಸಿಹಿಯಾಗಿರುತ್ತದೆ ಎನ್ನಲಾಗುತ್ತದೆ. ಕಲ್ಲಂಗಡಿ ಖರೀದಿಸುವ ಮುನ್ನ ಅದನ್ನು ಪರೀಕ್ಷಿಸಿ. ಇನ್ನು ಅಂಗಡಿಯಲ್ಲಿ ಕೆಂಪು ಕೆಂಪಾಗಿ ಕತ್ತರಿಸಿಟ್ಟ ಹಣ್ಣಿನ ಬಣ್ಣ ನೋಡಿ ಮಾರು ಹೋಗದಿರಿ. ಕೆಂಪು ಹಣ್ಣು ಇಂಜೆಕ್ಷನ್ ಕೊಟ್ಟು ಮಾಗಿಸಿದ್ದಾಗಿರುತ್ತದೆ. ಹೀಗಾಗಿ ಅಂಗಡಿಯಲ್ಲಿ ಮೊದಲೇ ಕತ್ತರಿಸಿ ಇಟ್ಟ ಕಲ್ಲಂಗಡಿ ಖರೀದಿ ಮಾಡುವುದು ಉತ್ತಮವಲ್ಲ.
ರೋಗ ನಿರೋಧಕ ಶಕ್ತಿ ಹೊಂದಿರು ಈ ಹಣ್ಣು ಕಣ್ಣು ಮತ್ತು ದೇಹವನ್ನು ತಂಪಾಗಿರಿಸುತ್ತದೆ. ಇದರಲ್ಲಿ ಆಂಟಿ ಅಕ್ಸಿಡೆಂಟ್, ಖನಿಜಾಂಶ, ವಿಟಾಮಿನ್ ಗಳು ಇದ್ದು ಬೇಸಿಗೆಯಲ್ಲಿ ತಿನ್ನಬೇಕಾದ ದಿ ಬೆಸ್ಟ್ ಹಣ್ಣುಗಳಲ್ಲಿ ಕಲ್ಲಂಗಡಿಯದ್ದು ಮೊದಲನೇ ಸ್ಥಾನ. ಈ ಹಣ್ಣನ್ನು ಬಗೆ ಬಗೆಯ ಜ್ಯೂಸ್ ಗಳು, ಸಲಾಡ್ ಮಾಡಿಯೂ ತಿನ್ನಬಹುದು.