ಸಮಗ್ರ ನ್ಯೂಸ್: ಸುಳ್ಯದ ಗೌಡರು ಆಡುವ ಅರೆಭಾಷೆಯಲ್ಲಿ ‘ಮೂಗಜ್ಜನ ಕೋಳಿʼ ಎಂಬ ಮೊದಲ ಚಿತ್ರ ನಿರ್ಮಾಣವಾಗಿದೆ. ಈ ಹಿಂದೆ ರಾಷ್ಟ್ರಪ್ರಶಸ್ತಿ ವಿಜೇತ ಜೀಟಿಗೆ ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಮಾಡ ಈ ಚಿತ್ರ ನಿರ್ದೇಶಿಸಿದ್ದಾರೆ.
ಈಗ ಈ ಸಿನಿಮಾ ಬಗ್ಗೆ ಒಂದು ಖುಷಿ ವಿಚಾರವಿದೆ . ಅದೇನಪ್ಪ ಅಂದ್ರೆ , ‘ಮೂಗಜ್ಜನ ಕೋಳಿ’ ಯುಕೆ ಮೂಲದ 13 ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ . ಮೇ 29, 2023 ರಿಂದ ಪ್ರಾರಂಭವಾಗುವ ಚಲನಚಿತ್ರೋತ್ಸವವು ಆನ್‌ಲೈನ್‌ನಲ್ಲಿ ಸ್ಪರ್ಧಾತ್ಮಕ ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶವನ್ನು ಮಾಡಿಕೊಡಲಾಗಿದೆ . ಉತ್ಸವ ಪ್ರಾಧಿಕಾರದ ಅಧಿಸೂಚನೆಯಂತೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ನಿರ್ದೇಶಕ ಸಂತೋಷ್ ಮಾಡ ” 13 ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಖುಷಿಯಾಗಿದೆ . ನಾವು ಮೊದಲ ಬಾರಿಗೆ ಚಲನಚಿತ್ರ ನಿರ್ಮಾಪಕರ ಅಧಿವೇಶನ ವಿದೇಶಿ ಭಾಷೆಯ ಚಲನಚಿತ್ರಗಳ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದೇವೆ ” ಎಂದರು .
ನಿರ್ಮಾಪಕ ಕೆ ಸುರೇಶ್ ಅವರ ಬಗ್ಗೆ ಮಾತನಾಡಿ ” ಒಂದು ಸಿನಿಮಾ ನಿರ್ಮಾಣವಾಗಲು ನಿರ್ಮಾಪಕರ ಪಾತ್ರ ತುಂಬಾ ದೊಡ್ಡದು . ಅದು ಹೀಗೆ ಚಿಕ್ಕ ಸಿನಿಮಾಗಳಿಗೆ ಬಂಡವಾಳ ಹಾಕಲು ಯೋಚನೆ ಮಾಡುತ್ತಾರೆ . ಆದರೆ ಸುರೇಶ್ ಅವರು ಒಪ್ಪಿಕೊಂಡು ತುಂಬಾ ಸಪೂರ್ಟ್ ಮಾಡಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ ” ಎಂದರು .
ಬಯಲುಸೀಮೆಯಲ್ಲಿ ಬೆಳೆದ ಹುಡುಗಿಯೊಬ್ಬಳು ಸುಳ್ಯಕ್ಕೆ ಬಂದು ಅಲ್ಲಿನ ನಿಸರ್ಗ ಮತ್ತು ಜೀವನ ಶೈಲಿಗೆ ಮಾರು ಹೋದ ಸುಂದರ ಕಥಾಹಂದರ . ಅಲ್ಲಿನ ಸುಂದರ ಪರಿಸರ ಕಂಡು ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಹುಡುಗಿಯ ಪಕ್ಕದ ಮನೆಯಲ್ಲಿ ಮಾತುಬಾರದ “ಮೂಗಜ್ಜ”, ಕೋಳಿ ಸಾಕಿಕೊಂಡು ಇರುತ್ತಾನೆ. ಈ ಹುಡುಗಿ ಹಾಗೂ ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಹಾಗೂ ಸಂಬಂಧಗಳ ಕಥೆಯೇ “ಮೂಗಜ್ಜನ ಕೋಳಿ”.
ಇನ್ನೂ ಮೂಗಜ್ಜನ ಪಾತ್ರದಲ್ಲಿ ನವೀನ್ ಡಿ ಪಡೀಲ್ ಹಾಗೂ ಕನಸು ಎಂಬ ಮಗುವಿನ ಪಾತ್ರದಲ್ಲಿ ಕುಮಾರಿ ಗೌರಿಕ ದೀಪುಲಾಲ್ ಅಭಿನಯಿಸಿದ್ದಾರೆ . ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯ, ರಾಘವೇಂದ್ರ ಭಟ್, ಡಾ. ಜೀವನ್ ರಾಮ್ ಸುಳ್ಯ, ಕುಮಾರಿ ಸಾನಿಧ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಡಾ. ಜೀವನ್ ರಾಮ್ ಸುಳ್ಯ ನಿರ್ದೇಶಿಸಿದ್ದ ಅಮರಸುಳ್ಯ ಸ್ವಾತಂತ್ರ್ಯ ಹೋರಾಟ 1837 ನಾಟಕದ ತುಣುಕುಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಈ ಮಕ್ಕಳ ಚಿತ್ರಕ್ಕೆ ಕೆ.ಸುರೇಶ್ ನಿರ್ಮಾಪಕರು , ಅರೆಭಾಷೆಯ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರ ಸಾಹಿತ್ಯಕ್ಕೆ ಅರುಣ್ ಗೋಪಾನ್ ಸಂಗೀತ ನೀಡಿ ಹಿನ್ನಲೆ ಗಾಯಕಿ ಆಶಾ ಭಟ್ ಹಾಡಿದ್ದಾರೆ. ಸುರೇಶ್ ಅರಸ್ ಅವರ ಸಂಕಲನ, ರಂಜಿತ್ ಅಂಬಾಡಿ ವರ್ಣಾಲಂಕಾರ, ಚಿತ್ರಕಥೆ ಸಂಭಾಷಣೆ ರಮೇಶ್ ಶೆಟ್ಟಿಗಾರ್, ಕಲಾ ನಿರ್ದೇಶನ ರಾಜೇಶ್ ಬಂದ್ಯೋಡ್, ವಸ್ತ್ರಲಂಕಾರ ಮೀರ ಸಂತೋಷ್, ವಿಷ್ಣುಪ್ರಸಾದ್ ಛಾಯಾಗ್ರಹಣ, ಅರುಣ್ ಗೋಪನ್ ಹಾಡು ಸಂಯೋಜನೆ ಹಾಗೂ ದೀಪಾಂಕುರನ್ ಅವರ ಹಿನ್ನೆಲೆ ಸಂಗೀತವಿದೆ.