ಸಮಗ್ರ ನ್ಯೂಸ್: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿಗೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದೀಗ ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಕಾವೂರು ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಹೇರಿದ್ದಾರೆ.
ಮೂಡುಬಿದ್ರೆ ಮತಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆಯ ಮತಗಟ್ಟೆ ಒಂದಕ್ಕೆ ಸಂಜೆ ವೇಳೆಗೆ ಮಿಥುನ್ ರೈ ತೆರಳಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಸಂಜೆ ಏಳು ಗಂಟೆ ವೇಳೆಗೆ ಅಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಘೋಷಣೆ ಕೂಗಿದ್ದಾರೆ.
ಈ ವೇಳೆ, ಮಿಥುನ್ ರೈ ಕಾರು ನಿಲ್ಲಿಸಿದ್ದು ಜೊತೆಗಿದ್ದ ಬೆಂಬಲಿಗರು ಕಾಂಗ್ರೆಸ್ ಜೈಕಾರ ಹಾಕಿದ್ದಾರೆ. ಕೂಡಲೇ ಎರಡೂ ಕಡೆಯಲ್ಲಿ ಗುಂಪು ಜಮಾವಣೆ ಆಗಿದ್ದು ಕಾರ್ಯಕರ್ತರು ಪರಸ್ಪರ ವಿರುದ್ಧ ಘೋಷಣೆ ಕೂಗಿದ್ದಾರೆ. ಎರಡು ತಂಡಗಳ ಮಧ್ಯೆ ವಾಗ್ವಾದ, ತಳ್ಳಾಟ ನಡೆಯುತ್ತಿದ್ದಾಗಲೇ ಕಲ್ಲು ತೂರಾಟ ಆಗಿದ್ದು ಮೂವರು ಕಾಂಗ್ರೆಸ್ ಕಾರ್ಯಕರ್ತರು ಏಟು ಬಿದ್ದು ಗಾಯಗೊಂಡಿದ್ದಾರೆ.
ಘಟನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಕುಲದೀಪ್ ಜೈನ್, ಘಟನೆ ಹಿನ್ನೆಲೆಯಲ್ಲಿ ಕಾವೂರು ಠಾಣೆ ವ್ಯಾಪ್ತಿಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದೇವೆ. ಮೂಡುಶೆಡ್ಡೆಗೆ ಹೊರಭಾಗದ ಜನರು ಬರದಂತೆ ಚೆಕ್ ಪೋಸ್ಟ್ ಹಾಕಿದ್ದೇವೆ ಎಂದರು. ಕಾರ್ಯಕರ್ತರು ಘೋಷಣೆ ಕೂಗಿದ ಕಾರಣಕ್ಕೆ ಸಮಸ್ಯೆ ಉಂಟಾಗಿದೆ ಎಂಬ ಮಾಹಿತಿ ಇದೆ. ತನಿಖೆ ನಡೆಸುತ್ತೇವೆ, ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಲ್ಪ ಗಾಯವಾಗಿದೆ. ಒಬ್ಬರು ಪೊಲೀಸ್ ಸಿಬಂದಿಗೂ ಕಲ್ಲೇಟಿನಿಂದ ಗಾಯ ಆಗಿದೆ. ಉದ್ರಿಕ್ತ ಗುಂಪನ್ನು ಪೊಲೀಸರು ಚದುರಿಸಿದ್ದಾರೆ, ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದರು.