ಸಮಗ್ರ ನ್ಯೂಸ್: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ರಾಜ್ಯದೆಲ್ಲೆಡೆ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಬಿಗಿ ಭದ್ರತೆ ಕ್ರಮಗಳನ್ನು ಕೈಗೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ವಿಧಾನಸಭೆ ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ರಾಜ್ಯದಾದ್ಯಂತ ಒಟ್ಟು 1.60 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಭದ್ರತಾ ಕಾರ್ಯದಲ್ಲಿ 304 ಡಿವೈಎಸ್‌ಪಿ, 991 ಪೊಲೀಸ್ ಸಬ್ ಇನ್ಸ್‌ಪೆಕ್ಟರ್, 2610 ಪಿಎಸ್‌ಐ, 5803 ಎಎಸ್‌ಐ ಸೇರಿದಂತೆ 84,000 ಸಿಬ್ಬಂದಿಗಳ ನಿಯೋಜನೆ ಮಾಡಿದ್ದೇವೆ. ಇವರೊಂದಿಗೆ 8.5 ಸಾವಿರ ಹೋಂ ಗಾರ್ಡ್ಸ್, 650 ಸಿಆರ್‌ಪಿಎಫ್ ತುಕಡಿ, ಕೆಎಸ್‌ಆರ್‌ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಹೆಚ್ಚಿನ ಭದ್ರತೆಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಗೋವಾದಿಂದ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆ ಯಾವ ಚುನಾವಣೆಯಲ್ಲಿಯೂ ಇಷ್ಟೊಂದು ಸಿಬ್ಬಂದಿ ಬಳಸಿಕೊಳ್ಳಲಾಗಿರಲಿಲ್ಲ. ಚುನಾವಣಾಧಿಕಾರಿಗಳ ಕೆಲವು ಮಾನದಂಡಗಳ ಪ್ರಕಾರ ನಿಯೋಜನೆ ಮಾಡಲಾಗಿದೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.
ಇದೇ ವೇಳೆ ಸೂಕ್ಷ್ಮ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ವರುಣಾ, ಚಾಮುಂಡೇಶ್ವರಿ, ಹಾಸನ, ಚನ್ನಪಟ್ಟಣ, ಕನಕಪುರ, ಚಿತ್ತಾಪುರ ಕಡೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕಾಗಿ ಐಪಿಎಸ್ ಅಧಿಕಾರಿಗಳ ಮೂಲಕ 5 ದಿನಗಳಿಂದ ನಿಗಾ ಇಡಲಾಗಿದೆ. 11,617 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿ ಪರಿಗಣಿಸಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.