ಸಮಗ್ರ ನ್ಯೂಸ್: ‘ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಮುಂದುವರಿದರೆ ಕೇಂದ್ರದ ಯೋಜನೆಗಳು ಮುಂದುವರಿಯುತ್ತವೆ. ಒಂದು ವೇಳೆ ಸಿದ್ದರಾಮಯ್ಯನವರ ಸರ್ಕಾರ ಬಂದರೆ ಅವುಗಳಿಗೆ ಬ್ರೇಕ್ ಬೀಳುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.
ಹರಪನಹಳ್ಳಿ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಭಾನುವಾರ ಮತಯಾಚಿಸಿ ಮಾತನಾಡಿದ ಅವರು, ‘ಡಬಲ್ ಎಂಜಿನ್ ಸರ್ಕಾರ ಮುಂದುವರಿದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಗರೀಬ್ ಅನ್ನ ಕಲ್ಯಾಣ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ ಸಿಗುತ್ತದೆ. ಪ್ರತಿದಿನ ಮಕ್ಕಳಿಗೆ ಅರ್ಧ ಲೀಟರ್ ಹಾಲು ಸಿಗುತ್ತದೆ. ಒಂದು ವೇಳೆ ಸಿದ್ದರಾಮಯ್ಯನವರ ಸರ್ಕಾರ ಬಂದರೆ ಇವುಗಳಿಗೆ ಬ್ರೇಕ್ ಬೀಳುತ್ತದೆ’ ಎಂದರು.
ನಡ್ಡಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಸೇರಿದಂತೆ ರಾಜ್ಯದ ಮತದಾರರು ಸಿಡಿದೆದ್ದಿದ್ದಾರೆ. “ರಾಜ್ಯದ ಜನತೆ ತೆರೆಗೆ ಕೊಡುವುದನ್ನೇ ನಿಲ್ಲಿಸಬೇಕಾಗುತ್ತದೆ, ನಮ್ಮಿಂದ ನೀವೇ ಹೊರತು, ನಿಮ್ಮಿಂದ ನಾವಲ್ಲ” ಎಂದು ಅಭಿಪ್ರಾಯ ತಾಳುತ್ತಿದ್ದಾರೆ.
“ಬಿಜೆಪಿ ಸೋತರೆ ಕರ್ನಾಟಕದಿಂದ ಕೇಂದ್ರ ಸಂಗ್ರಹಿಸುವ ಜಿಎಸ್‌ಟಿಯೂ ಬಂದ್ ಎಂದು ಹೇಳಿಕೆ ನೀಡುವ ದಮ್ಮು ತಾಕತ್ತು ಇದೆಯೇ ನಡ್ಡಾ ಅವರೇ? ಡಬಲ್ ಇಂಜಿನ್ ಇದ್ದಾಗಲೂ ಕೇಂದ್ರದಿಂದ ಕರ್ನಾಟಕಕ್ಕೆ ಸಿಕ್ಕಿದ್ದು ಖಾಲಿ ಚಿಪ್ಪು ಅಲ್ಲವೇ? ನೆರೆ ಪರಿಹಾರ, ಜಿಎಸ್‌ಟಿ ಬಾಕಿ, ಲಸಿಕೆ, ಆಕ್ಸಿಜನ್, ಹಣಕಾಸು ಆಯೋಗದ ಹಣ ಎಲ್ಲದರಲ್ಲೂ ಮಹಾದ್ರೋಹ ಎಸಗಿದ್ದೀರಲ್ಲವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.