ಸಮಗ್ರ ನ್ಯೂಸ್: ‘ವಿಶ್ವ ಆರೋಗ್ಯ ಸಂಸ್ಥೆ’ ಸಿಹಿಸುದ್ದಿ ತಿಳಿಸಿದ್ದು, ಕೊರೊನಾ ಕಂಟಕದ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಯಾಗಿದೆ ಎಂದಿದೆ. ಬರೋಬ್ಬರಿ 3 ವರ್ಷಗಳ ನಂತರ ಎಲ್ಲವೂ ಸರಿದಾರಿಗೆ ಬಂದಂತಾಗಿದೆ. 68 ಲಕ್ಷ ಜನರ ಸಾವಿನೊಂದಿಗೆ ಕೊರೊನಾ ವೈರಸ್ ಬಹುತೇಕ ಕರಾಳ ಅಧ್ಯಾಯ ಮುಗಿಸಿದೆ.
17 ನವೆಂಬರ್ 2019, ಯಾರಿಗೂ ತಿಳಿಯದ ವೈರಸ್ ಒಂದು ಚೀನಾದಲ್ಲಿ ಕಂಡುಬಂದಿತ್ತು. ಚೀನಾದ ವುಹಾನ್ ಜನರ ಮೇಲೆ ಮೊದಲು ದಾಳಿ ಮಾಡಿದ್ದ ಕೊರೊನಾ ನಂತರ ಜಗತ್ತಿಗೇ ಹರಡಿತ್ತು. ವುಹಾನ್ ಪ್ರಾಂತ್ಯದಲ್ಲಿ ಸಂಶಯಾಸ್ಪದ ವೈರಸ್ ಕಂಡ ಕೂಡಲೇ ಚೀನಾ ಲಾಕ್‌ಡೌನ್ ಹೇರಿ, ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿತ್ತು. ಆದರೆ ಅದ್ಯಾವುದೂ ವರ್ಕ್ ಆಗಲಿಲ್ಲ. ನೋಡ ನೋಡುತ್ತಲೇ ಜಗತ್ತಿಗೇ ವ್ಯಾಪಿಸಿದ ಕೊರೊನಾ ಸೋಂಕು, ಈವರೆಗೂ 68 ಲಕ್ಷಕ್ಕೂ ಹೆಚ್ಚು ಜನರನ್ನ ಬಲಿಪಡೆದಿದೆ. ಆದರೆ ಕೊನೆಗೂ 3 ವರ್ಷದ ನಂತರ ಮನುಷ್ಯರಿಗೆ ಸಿಹಿಸುದ್ದಿ ಸಿಕ್ಕಿದೆ.
‘ವಿಶ್ವ ಆರೋಗ್ಯ ಸಂಸ್ಥೆ’ ಈಗ ಘೋಷಣೆ ಮಾಡಿದಂತೆ ಕೊರೊನಾ ತುರ್ತು ಪರಿಸ್ಥಿತಿ ಮುಕ್ತಾಯವಾಗಿದೆ. ಆದರೆ ಕೊರೊನಾ ವೈರಸ್ ಸಂಪೂರ್ಣವಾಗಿ ತೊಲಗಿಲ್ಲ. ಹೀಗಾಗಿ ಈಗಲೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಕೊರೊನಾ ವೈರಾಣು ಇನ್ನೂ ಹಲವು ವರ್ಷಗಳ ಕಾಲ ಮನುಷ್ಯರ ನಡುವೆ ಇರುವುದು ಪಕ್ಕಾ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಹಿಂದೆ ಇದ್ದಷ್ಟು ಪ್ರಬಲತೆ ವೈರಸ್‌ಗೆ ಇಲ್ಲ, ಹೀಗಾಗಿ ತುರ್ತು ಪರಿಸ್ಥಿತಿ ಬದಲಾಗಿದೆ ಅಷ್ಟೇ. ಆದರೆ ಕೊರೊನಾ ಕಂಟಕ ಇದ್ದೇ ಇರುತ್ತದೆ, ಈ ಮೂಲಕ ಮುನ್ನೆಚ್ಚರಿಕೆ ವಹಿಸಿ ಜೀವನ ನಡೆಸಬೇಕಿದೆ.
ವಿಶ್ವ ಆರೋಗ್ಯ ಸಂಸ್ಥೆ’ ತಿಳಿಸಿರುವಂತೆ 2021ರ ಜನವರಿಯಲ್ಲಿ ವಾರಕ್ಕೆ 1 ಲಕ್ಷಕ್ಕಿಂತ ಹೆಚ್ಚು ಜನರು ಮೃತಪಡುತ್ತಿದ್ದರು. ಈ ಲೆಕ್ಕ ಈಗ ಏಪ್ರಿಲ್ 24ರ ಹೊತ್ತಿಗೆ 3500 ಕ್ಕೆ ಇಳಿಕೆಯಾಗಿದೆ. ಹೀಗಾಗಿ ಎಲ್ಲವನ್ನ ಅಳೆದು, ತೂಗಿ ಆರೋಗ್ಯ ತುರ್ತು ಪರಿಸ್ಥಿತಿ ಹಿಂಪಡೆಯಲು ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಭೆ ನಡೆಸಿತ್ತು. 15 ನೇ ಬಾರಿಗೆ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು WHO ಮುಖ್ಯಸ್ಥರು ತಿಳಿಸಿದ್ದಾರೆ. ಅಮೆರಿಕದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಹಿಂಪಡೆದು, ಕಡ್ಡಾಯ ಲಸಿಕೆ ನೀತಿಗೆ ಗುಡ್‌ಬೈ ಹೇಳಿದ ಕೆಲ ದಿನದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ನಿರ್ಧಾರ ಪ್ರಕಟಿಸಿದ್ದು ವಿಶೇಷ.