ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ನೀಡಿರುವ ಅವಕಾಶ ಬಹುತೇಕ ಯಶಸ್ವಿಯಾಗಿದೆ.
ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಮೇ 4ರ ವರೆಗೆ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರ ಪೈಕಿ ಶೇ 92ರಷ್ಟು ಮಂದಿ ಮತದಾನ ಮಾಡಿದ್ದಾರೆ. ಒಟ್ಟು 80,250 ಮಂದಿ ಮನೆಯಿಂದಲೇ ಮತದಾನ ಮಾಡುವ ಆಯ್ಕೆಯನ್ನು ಆರಿಸಿಕೊಂಡಿದ್ದರು ಎಂದು ಆಯೋಗ ಹೇಳಿದೆ.
80 ವರ್ಷ ಮೇಲ್ಪಟ್ಟ 80,250 ಮಂದಿ ಹಾಗೂ 19,279 ಅಂಗವಿಕಲರು ಮನೆಯಿಂದಲೇ ಮತದಾನ ಆಯ್ಕೆ ಮಾಡಿಕೊಂಡಿದ್ದರು.
ಏಪ್ರಿಲ್ 29ರಿಂದ ಮನೆಯಿಂದಲೇ ಮತದಾನ ಆರಂಭವಾಗಿದ್ದು, ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತದಾರರ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತ ಪಡೆದುಕೊಂಡು ವಾಪಸಾಗುತ್ತಿದ್ದಾರೆ. 80 ವರ್ಷ ಮೇಲ್ಪಟ್ಟ 80,250 ಮಂದಿ ಪೈಕಿ ಈವರೆಗೆ 73,743 ಮಂದಿ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಶೇ 91.89ರಷ್ಟು ಜನ ಮತದಾನ ಮಾಡಿದಂತಾಗಿದೆ.
ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿದ್ದ 19,279 ಅಂಗವಿಕಲರ ಪೈಕಿ 17,943 ಮಂದಿ ಮೇ 4ರ ವರೆಗೆ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಶೇ 93.7ರಷ್ಟು ಮತದಾನವಾದಂತಾಗಿದೆ.