ಸಮಗ್ರ ನ್ಯೂಸ್: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮೇ 8ರಿಂದ ಚುರುಕು ಪಡೆಯಲಿದೆ. ಶುಕ್ರವಾರ ಬಳ್ಳಾರಿ ಜಿಲ್ಲೆಯ ಹಗರಿ, ತುಮಕೂರಿನ ಮಿಡಿಗೇಶಿ, ಕಲಬುರಗಿಯ ಚಿತ್ತಾಪುರ, ಬೆಂಗಳೂರು ನಗರದ ಜ್ಞಾನಭಾರತಿ ವಿವಿ ಕ್ಯಾಂಪಸ್, ಬಳ್ಳಾರಿಯ ಕುರುಗೋಡು, ಕೋಲಾರ ಹಾಗೂ ರಾಮನಗರ ಸೇರಿ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ಬಿದ್ದಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ವಿಜಯಪುರ ಜಿಲ್ಲೆಯ ಒಂದೆರಡು ಕಡೆ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯು ಮೇ 8ರಂದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸುತ್ತಮುತ್ತ ಪ್ರದೇಶಗಳು, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ರಾಯಲಸೀಮಾ ಹಾಗೂ ಕರ್ನಾಟಕದಲ್ಲಿ ಭರ್ಜರಿ ವರ್ಷಧಾರೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ( ಐಎಂಡಿ) ಮುನ್ಸೂಚನೆ ಕೊಟ್ಟಿದೆ.