ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಒಂದು ಕಾಲದಲ್ಲಿ ರೌಡಿಗಳ ಕೂಟವಿತ್ತು. ಪುತ್ತೂರನ್ನು ಗೂಂಡಾ ಸಾಮ್ರಾಜ್ಯ ಆಳುತ್ತಿತ್ತು. ಅಂಥ ಪುತ್ತೂರಿನಲ್ಲಿ ಸಾಮಾನ್ಯನಿಗೆ ಓಡುವ ವ್ಯವಸ್ಥೆ ಮಾಡಿದ್ದು ಬಿಜೆಪಿ. ಅಂಥಹ ವ್ಯವಸ್ಥೆ ಮತ್ತೆ ಮರುಕಳಿಸಲು ಅವಕಾಶ ನೀಡಲ್ಲ, ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಪ್ರಚಾರಕ್ಕೆ ಪುತ್ತೂರಿಗೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಪುತ್ತೂರು ಮಾಜಿ ಶಾಸಕರೂ ಆಗಿರುವ ಡಿವಿಎಸ್ ಪುತ್ತೂರಿನ ಅಂದಿನ ಸ್ಥಿತಿಯನ್ನು ಮಾದ್ಯಮಗಳಿಗೆ ವಿವರಿಸಿದರು. ಪುತ್ತೂರಿನ ಈಶ್ವರಮಂಗಲ ಎನ್ನುವ ಪ್ರದೇಶ ಮಿನಿ ಪಾಕಿಸ್ತಾನದಂತಿತ್ತು.
ಅಂಥ ವ್ಯವಸ್ಥೆಯನ್ನು ಬಿಜೆಪಿ ಬದಲಿಸಿದೆ. ಆ ಸಮಯದಲ್ಲಿ ನನ್ನ ಮೇಲೆ 101 ಕೇಸಿತ್ತು, ಆ ಬಳಿಕ ಶಾಸಕನಾಗಿದ್ದಾಗ 3 ಕೇಸ್ ಇತ್ತು. ಈಗ ಅದೇ ರೀತಿಯ ಗೂಂಡಾರಾಜ್ಯ ಸ್ಥಾಪನೆಗೆ ಕಾಂಗ್ರೆಸ್ ಮತ್ತು ಸ್ವಯಂ ಘೋಷಿತ ಹಿಂದೂ ಮುಖಂಡರಾದ ಪಕ್ಷೇತರ ಅಭ್ಯರ್ಥಿ ಮಾಡಲು ಹೊರಟಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ನನ್ನ ಮಿತ್ರರಾಗಿದ್ದರು.
ಬಿಜೆಪಿಯಲ್ಲಿ ಯಾರಲ್ಲಾ ಎಷ್ಟು ಸಮಯ ಇರ್ತಾರೆ ಅಲ್ಲಿಯವರೆಗೆ ನಾನು ಅವರ ಆಪ್ತಮಿತ್ರ, ಪಾಲುದಾರರು. ನನ್ನ ಪಕ್ಷನಿಷ್ಟೆಯ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಕೇಂದ್ರ ಕ್ಯಾಬಿನೆಟ್ ರಿಶಫಲ್ ಮಾಡುವಾಗ ನನಗೆ ಪಕ್ಷಕ್ಕಾಗಿ ದುಡಿಯುವಂತೆ ಸೂಚಿಸಿದ್ದಾರೆ. ಅದನ್ನೇ ಈಗ ಮಾಡುತ್ತಿದ್ದೇನೆ. ಬಿಜೆಪಿ ನನ್ನನ್ನು ಮುಖ್ಯಮಂತ್ರಿ, ಕೇಂದ್ರ ಸಚಿವ, ಪಕ್ಷದ ಅಧ್ಯಕ್ಷ ಹೀಗೆ ಎಲ್ಲವನ್ನೂ ಮಾಡಿದೆ. ಇಷ್ಟೆಲ್ಲಾ ಕೊಟ್ಟ ಪಕ್ಷದ ವಿರುದ್ಧ ಸಂತೃಪ್ತನಾಗದಿರಲು ನಾನು ಪ್ರಾಣಿಯಾ,ಮನುಷ್ಯನಾ ಎಂದು ಪ್ರಶ್ನಿಸಿದರು.
ಪಕ್ಷದಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ಹೋಗೋದು, ಹಿಂದೂ ಮುಖಂಡನಾಗಿ ಪಕ್ಷೇತರ ನಿಲ್ಲೋದು ಆದರ್ಶವಲ್ಲ. ನನಗೆ ಸೀಟ್ ಸಿಕ್ಕಿಲ್ಲ ಅಂತ ಇನ್ನೊಂದು ಪಾರ್ಟಿಯಲ್ಲಿ ನಿಲ್ಲೋದು ಆದರ್ಶ ಅಲ್ಲ. ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಯಲ್ಲಿದ್ದಾಗ ಸೆನೆಟ್ ಮೆಂಬರ್ ಆಗಿ ಮಾಡಲಾಗಿತ್ತು. ಸಾವಿರಾರು ಕಾರ್ಯಕರ್ತರಿಗೆ ಸಿಗದ ಅವಕಾಶ ಅವರಿಗೆ ನೀಡಲಾಗಿತ್ತು.ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಯ ಷಡ್ಯಂತ್ರಕ್ಕೆ ಬಿಜೆಪಿ ಯಾವತ್ತೂ ಬಲಿಯಾಗಲ್ಲ ಎಂದು ಡಿವಿಎಸ್ ಹೇಳಿದರು.