ಸಮಗ್ರ ನ್ಯೂಸ್: ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು ವ್ಯಾಪ್ತಿಯ ಕೆಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಬುಧವಾರ ಸಹ ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ‘ಯೆಲ್ಲೊ ಅಲರ್ಟ್’ ನೀಡಲಾಗಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲೂ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿ ಮಂಗಳವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ರಾಜ್ಯದಲ್ಲೇ ಗರಿಷ್ಠ ಉಷ್ಣಾಂಶ 37.2 ಡಿಗ್ರಿ ಸೆಲ್ಸಿಯಸ್ ಕಾರವಾರದಲ್ಲಿ ಸೋಮವಾರ ದಾಖಲಾಗಿತ್ತು.
ಸೋಮವಾರ ಬೆಳಿಗ್ಗೆ ಕೊನೆಗೊಂಡಂತೆ ಬೆಂಗಳೂರಿನ ಯಲಹಂಕದಲ್ಲಿ 7 ಸೆಂ.ಮೀ, ಕಲಬುರಗಿಯ ಯಡ್ರಾಮಿ, ಬೀದರ್‌ನ ಭಾಲ್ಕಿಯಲ್ಲಿ ತಲಾ 5 ಸೆಂ.ಮೀ, ಬೀದರ್ ಜಿಲ್ಲೆಯ ಹುಮನಾಬಾದ್, ಕೊಡಗಿನ ಪೊನ್ನಂಪೇಟೆ, ಚಿಕ್ಕಬಳ್ಳಾಪುರದ ತೊಂಡೇಬಾವಿ, ಗೌರಿಬಿದನೂರಿನಲ್ಲಿ ತಲಾ 4, ರಾಯಚೂರು ಹಾಗೂ ಕೊಪ್ಪಳದ ಗಂಗಾವತಿ ಹಾಗೂ ಬಳ್ಳಾರಿಯ ಸಿರಗುಪ್ಪದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.