ಸಮಗ್ರ ನ್ಯೂಸ್: ಇಂದಿನಿಂದ ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ರಾಜ್ಯ ಹವಾಮಾನ ಇಲಾಖೆ 11 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಿದೆ.
ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಮೈಸೂರು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಯಾದಂತೆ ಕಳೆದ 24 ಗಂಟೆಯಲ್ಲಿ ಹಾಸನದ ಕೊಣನೂರಿನಲ್ಲಿ 8 ಸೆಂ.ಮೀ, ಯಾದಗಿರಿಯ ಕಕ್ಕೇರಿಯಲ್ಲಿ 7 ಸೆಂ.ಮೀ, ಚಿಕ್ಕಮಗಳೂರು ಜಿಲ್ಲೆಯ ಶಿವನಿ 6, ವಿಜಯಪುರದ ಆಲಮಟ್ಟಿ, ಚಿತ್ರದುರ್ಗದ ಹೊಸದುರ್ಗ, ತುಮಕೂರಿನ ಗುಬ್ಬಿ, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ತಲಾ 5, ಕೊಪ್ಪಳದ ತಾವರಗೇರ, ರಾಯಚೂರಿನ ಸಿಂಧನೂರು- ಮುದಗಲ್, ಹಾಸನದ ಶ್ರವಣಬೆಳಗೊಳದಲ್ಲಿ ತಲಾ 4 ಸೆಂ.ಮೀ ಮಳೆ ಸುರಿದಿದೆ.