Ad Widget .

“ಉಚಿತ ಭರವಸೆ ಟೀಕಿಸುವ ಭರದಲ್ಲಿ ಬಡವರನ್ನು ಹಂಗಿಸದಿರಿ” – ಮಂಜುನಾಥ್ ಎಲ್.ಕೆ

ಸಮಗ್ರ ಡಿಜಿಟಲ್ ಡೆಸ್ಕ್: ಎಂ.ಜಿ.ರೋಡಿನ ಪ್ರೈಂ ರೋಸ್‌ ರಸ್ತೆಯಲ್ಲಿ ಕಚೇರಿಯಿತ್ತು. ಸಂಬಳದಲ್ಲಿ ತುಸು ಚೇತರಿಕೆ ಕಂಡಿದ್ದ ದಿನಗಳು. ನಾಲ್ವರು‌ ಶೇರಿಂಗ್‌ ಮಾಡಿಕೊಂಡಿದ್ದ ಮನೆಯ ಬಾಡಿಗೆ ಕಟ್ಟಿ, ಮೆಟ್ರೋದಲ್ಲಿ ಓಡಾಡಲು ಕನಿಷ್ಠ ಒಂದು ಸಾವಿರ ರೂಪಾಯಿ ಕಳೆದು, ಬರೋ ಸಂಬಳದಲ್ಲಿ ಅರ್ಧದಷ್ಟಾದರೂ ಉಳಿತಾಯ ಮಾಡಬೇಕೆಂಬ ಮಹದಾಸೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅರ್ಧ ಕಿ.ಮೀ. ದೂರದಲ್ಲೇ ಇಂದಿರಾ ಕ್ಯಾಂಟಿನ್‌. ಉಪಹಾರ, ಊಟಕ್ಕೆ 5, 10 ರೂಪಾಯಿ. ಮಾರ್ನಿಂಗ್‌ ಶಿಫ್ಟ್‌ ಇದ್ದಿದ್ದರಿಂದ ಕೇವಲ 15 ರೂಪಾಯಿಗೆ ತಿಂಡಿ, ಊಟವಾಗುತ್ತಿತ್ತು. ಅನ್ನವಿಟ್ಟು, ಮೊಸರು ಮತ್ತು ಉಪ್ಪಿನಕಾಯಿಯಲ್ಲಿ ಸರಿದೂಗಿಸಿದರೆ ರಾತ್ರಿ ಊಟವೂ ಸಂಪನ್ನ. ಒಂದಷ್ಟು ದಿನಗಳ ಕಾಲ ಹೀಗೆಯೇ ಸಾಗಿತ್ತು.

Ad Widget . Ad Widget . Ad Widget .

ನಡುನಡುವೆ ಸ್ನೇಹಿತರ ಅಥವಾ ಸಂಬಂಧಿಕರ ಪೈಕಿ ಕೆಲವರು ಯಾರಾದರೂ ಏನು ಊಟ ಮಾಡ್ದೆ, ಎಲ್ಲಿ ಊಟ ಮಾಡ್ದೆ ಎಂದು ಕೇಳಿದಾಗ “ಇಂದಿರಾ ಕ್ಯಾಂಟಿನ್‌” ಎನ್ನುತ್ತಿದ್ದೆ.

“ಅಲ್ಲಾ, ಅಲ್ಲಿ ಊಟ ಚೆನ್ನಾಗಿರತ್ತಾ?” ಎಂಬ ರಾಗದ ಪ್ರಶ್ನೆ ತೂರಿಬರುತ್ತಿತ್ತು. ಅದೊಂತರ ಕರುಣೆ ಬೆರೆತ, ಅವರಲ್ಲೊಬ್ಬನಾಗಿ ಅವರ ಸ್ಟೇಟಸ್‌ಗೆ ಕುಂದು ತಂದೆನೇನೋ ಎಂಬ ವ್ಯಥೆ ಭರಿತ, ಇಷ್ಟೊಂದು ಜಿಪುಣತನ ಅಂಟಿಕೊಂಡಿದೆಯಾ ಎಂಬ ತಾತ್ಸಾರ ಎಲ್ಲವೂ ತುಂಬಿರುತ್ತಿದ್ದ ಧ್ವನಿ.


ಯಾವುದೇ ಉಚಿತ ಸೌಲಭ್ಯಗಳು ಘೋಷಣೆಯಾದಾಗ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತವೆ. ತಾತ್ವಿಕ ನೆಲಗಟ್ಟಿನಲ್ಲಿ ಚರ್ಚೆಗಳಾದರೆ ಸ್ವಾಗತಾರ್ಹ. ಆದರೆ ಕೀಳು ಅಭಿರುಚಿಯಿಂದ ಕೂಡಿದ ವ್ಯಂಗ್ಯಗಳೇ ಹೆಚ್ಚಾಗಿ ವಿಜೃಂಭಿಸುತ್ತಿರುವುದು ಅತ್ಯಂತ ದುಃಖಕರ ಸಂಗತಿ. ಬಡವರ, ಮಧ್ಯಮ ವರ್ಗದವರ ಬಗ್ಗೆ ಪದವಿಗಿಂತ ಹೆಚ್ಚು ಓದಿಕೊಂಡವರೂ ಸಂವೇದನೆಯನ್ನು ಕಳೆದುಕೊಂಡಿರುವುದು ವಿಪರ್ಯಾಸ.

  • ಉಚಿತ ಯೋಜನೆಗಳಿಂದ ಜನಸಂಖ್ಯೆ ಜಾಸ್ತಿಯಾಗ್ತಿದೆ.
  • ಎಲ್ಲಾ ಫ್ರೀಯಾಗ್‌ ಕೊಟ್ಟು ಕೊಟ್ಟು ಜನರನ್ನ ಸೋಮಾರಿಗಳನ್ನಾಗಿ ಮಾಡ್ತಿದ್ದಾರೆ.
  • ಆ ಕಡೆ ಮೀಸಲಾತಿ ಬೇರೆ, ಈ ಕಡೆ ಬಿಟ್ಟಿ ಯೋಜನೆಗಳು ಬೇರೆ, ಕೂಲಿ ಮಾಡ್ತಿದ್ದವ್ರೆಲ್ಲ ಕೊಬ್ಬಿ ಕೂತಿದ್ದಾರೆ.
  • ಯುವಕರ ಕೈಗೆ ದುಡ್ಡು ಕೊಟ್ಟು ಕುಡುಕರನ್ನಾಗಿ ಮಾಡ್ತಿದ್ದಾರೆ.
  • ಅಧಿಕಾರದ ಆಸೆಗೆ ಮುಗ್ಧ ಜನರ ದಿಕ್ಕು ತಪ್ಪಿಸ್ತಿದ್ದಾರೆ.
  • ಬಿಟ್ಟಿ ಭಾಗ್ಯಗಳನ್ನು ಕೊಟ್ಟು ರಾಜ್ಯವನ್ನು ದಿವಾಳಿ ಮಾಡ್ತಿದ್ದಾರೆ.
  • ಬಿಟ್ಟಿ ಅಕ್ಕಿಯಿಂದ ಗಂಡನಿಗೆ ಅನ್ನ ಬೇಯಿಸಿಡಿ, ಉಚಿತ ಕರೆಂಟಿಂದ ಮನೆಹಾಳು ಸೀರಿಯಲ್‌ ನೋಡಿ, ಸಿಕ್ಕ ದುಡ್ಡಲ್ಲಿ ಶಾಪಿಂಗ್‌ ಮಾಡಿ, ಫ್ರೀಯಾಗಿ ಬೇಕಾದ್‌ ಕಡೆ ಓಡಾಡಿ.

ಇನ್ನೂ ಏನೇನೋ ವ್ಯಂಗ್ಯಗಳು, ತುಚ್ಛ ಮಾತುಗಳು!

ಬಹಳ ಸೂಕ್ಷ್ಮವಾಗಿ ಗಮನಿಸಿ. ಉಚಿತ ಯೋಜನೆಗಳ ಫಲಾನುಭವಿಗಳಾದ ಬಡವರು, ಶ್ರಮಿಕರು, ದಿನಗೂಲಿಗಳ ಬಗ್ಗೆ ನಮ್ಮ ಸಮಾಜದಲ್ಲಿ ಅದೆಷ್ಟು ಕೀಳರಿಮೆ ತುಂಬಿಕೊಂಡಿದೆ. ತಿಂಗಳಿಗೆ ಹೆಚ್ಚೆಂದರೆ 4-5 ಸಾವಿರದಷ್ಟು ಸೌಲಭ್ಯಗಳನ್ನು ಪಡೆದರೆ, ಸರ್ಕಾರವೇ ಅವರನ್ನು ಸಾಕಿ ಸಲುಹುತ್ತಿದೆಯೇನೋ ಎಂಬಷ್ಟು ಕೇವಲವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

ಕೆಲಸ ಮಾಡದವನು ಮನುಷ್ಯನಾಗಲಾರ. ಹುಟ್ಟಿದ ಮೇಲೆ ಹೊಟ್ಟೆ-ಬಟ್ಟೆಗೆ ದುಡಿಯಲೇಬೇಕು.

ಒಂದಷ್ಟು ಮಂದಿಗೆ ಹೊಟ್ಟೆ-ಬಟ್ಟೆಗೆ ಅಪ್ಪ ಮಾಡಿದ್ದಿರುತ್ತದೆ, ತನ್ನ ಬದುಕನ್ನು ಸ್ವತಂತ್ರವಾಗಿ ಕಂಡುಕೊಳ್ಳಬೇಕು ಎಂಬ ಕಾರಣಕ್ಕಷ್ಟೇ ಉದ್ಯೋಗ ಮಾಡುತ್ತಿರುತ್ತಾರೆ.

ಇನ್ನೊಂದಷ್ಟು ಜನ ಗ್ರಾಮೀಣ ಬದುಕು ತೊರೆದು ನಗರ ಜೀವನ ಅಳವಡಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಜಾಬ್‌ ಮಾಡುತ್ತಿರುತ್ತಾರೆ.

ಮತ್ತೊಂದಷ್ಟು ಜನಕ್ಕೆ ಪೂರ್ವಜರು ಮಾಡಿಟ್ಟ ಆಸ್ತಿ ಬೇಕಾದಷ್ಟು ಇರುತ್ತದೆ, ಆದರೆ ಸುತ್ತಾಟಕ್ಕೆ, ಹುಡುಗಿಗೆ, ಬಾರ್-ಪಬ್ ಮೋಜು ಮಸ್ತಿಗೆ ಪೋಷಕರನ್ನು ಕೇಳಲಾಗದ ಸಂಕಷ್ಟಕ್ಕೆ ಜಾಬ್‌ ಮಾಡುವವರಿದ್ದಾರೆ.

ಆದರೆ ಕೇವಲ ಆಹಾರಕ್ಕಾಗಿ, ಮಾನ ಮುಚ್ಚುವ ವಸ್ತ್ರಗಳಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ಹಗಲು-ರಾತ್ರಿ ಕಷ್ಟಪಡುತ್ತಿರುವ ಲಕ್ಷಾಂತರ ಮಂದಿ ನಮ್ಮನಿಮ್ಮ ನಡುವಲ್ಲಿದ್ದಾರೆ ಎಂಬುದನ್ನು ಒಳಗಣ್ಣು ತೆರೆದು ನೋಡಬೇಕಿದೆ.

ಬೆಲೆ ಏರಿಕೆಯ ಕಾಲದಲ್ಲಿ ಎಷ್ಟು ದುಡಿದರೂ ಬಡವನಿಗೆ ಆಯಾ ದಿನದ ಖರ್ಚುವೆಚ್ಚವನ್ನು ನಿಭಾಯಿಸಲಷ್ಟೇ ಸಾಧ್ಯವಾಗುತ್ತಿದೆ. ಇನ್ನು ಮಧ್ಯಮ ವರ್ಗದವರ ಸ್ಥಿತಿ ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ ಎಂಬುದು ಖಾಯಂ. ಶ್ರೀಮಂತರದ್ದು ಬಿಡಿ, ಬ್ಯಾಂಕಿನಿಂದ ಬರುವ ಬಡ್ಡಿ ದುಡ್ಡಲ್ಲೇ ಐಶಾರಾಮಿ ಬದುಕು ಸಾಗಿಸುವಂತಿರುತ್ತದೆ.

ಬಡ ಕುಟುಂಬದಲ್ಲಿ ಹುಟ್ಟಿದ ಹುಡುಗನನ್ನು, ಶ್ರೀಮಂತ ಮನೆತನದಿಂದ ಹುಟ್ಟಿದ ಹುಡುಗನನ್ನು ಅಕ್ಕಪಕ್ಕ ನಿಲ್ಲಿಸಿ ಅವರವರಿಗಿರುವ ಅನುಕೂಲತೆ, ಅನಾನುಕೂಲತೆಗಳ ಬಗ್ಗೆ ಒಂದೈದು ನಿಮಿಷವಾದರೂ ಚಿಂತಿಸಿ.

ಬೆಳಗ್ಗೆ ಎದ್ದಿದ್ದೇ ಮನೆಮನೆಗೆ ಪೇಪರ್‌/ಹಾಲು ಹಾಕಿ ಕಾಲೇಜಿನ ಬಸ್‌ ಚಾರ್ಚಿಗಾಗಿ, ಯೂನಿಫಾರ್ಮ್‌ ಹೊಲಿಸುವುದಕ್ಕಾಗಿ ಹಣ ಮಾಡಿಕೊಳ್ಳುವ ಹುಡುಗರು ಎಷ್ಟಿಲ್ಲಾ? ಸಣ್ಣ ಮಕ್ಕಳಿಗೆ ಟ್ಯೂಷನ್‌ ಹೇಳಿಕೊಟ್ಟು ಒಂದಿಷ್ಟು ಖರ್ಚಿಗೆ ದುಡಿದುಕೊಳ್ಳುವ ಕಾಲೇಜು ಹುಡುಗಿಯರು ಎಷ್ಟಿಲ್ಲಾ? ಸರ್ಕಾರಿ ಹುದ್ದೆಗಳೆಲ್ಲ ಲಂಚಕ್ಕೆ ಬಿಕರಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಅಸಹಾಯಕರಾಗಿ ನಿಂತಿರುವ ಯುವಕ-ಯುವತಿಯರು ಎಷ್ಟಿಲ್ಲಾ?

ಸರ್ಕಾರದಿಂದ ಸಿಗುವ ಅಲ್ಪಸ್ವಲ್ಪ ಸಹಾಯಧನ, ಉಚಿತ ಸೌಲಭ್ಯಗಳನ್ನು ಪಡೆಯುತ್ತಿರುವ ಇಂತಹ ಕೋಟ್ಯಂತರ ಮಂದಿಯನ್ನು ಯಕಶ್ಚಿತ್‌ “ಬಿಟ್ಟಿಗೆ ಬದುಕುತ್ತಿರುವವರು” ಎನ್ನಲು ಹೇಗೆ ತಾನೆ ಮನಸ್ಸು ಬರುತ್ತದೆ? ಪೂರ್ವಜರು ಆಸ್ತಿ, ಅಂತಸ್ತು ಎಂದು ಕೂಡಿಡದಿದ್ದರೆ, ಮಗನ ಭವಿಷ್ಯ ಚೆನ್ನಾಗಿರಲೆಂದು ಕೋಟ್ಯಂತರ ಲಂಚ ಕೊಟ್ಟು ಸರ್ಕಾರಿ ಅಧಿಕಾರಿಯನ್ನಾಗಿಸದೆ ಇದ್ದಿದ್ದರೆ, ಇಂಜಿನಿಯರಿಂಗ್‌ ಮಾಡಿಸದೆ ಇದ್ದಿದ್ದರೆ, ಎಂಬಿಬಿಎಸ್‌ ಓದಿಸದೆ ಇದ್ದಿದ್ದರೆ – ಇಷ್ಟು ಕೇವಲವಾಗಿ ಕಾಮೆಂಟ್‌ಗಳನ್ನು ಮಾಡಲು ಸಾಧ್ಯವಾಗುತ್ತಿತ್ತಾ?

ಉಚಿತ ಸೌಲಭ್ಯಗಳನ್ನು ಟೀಕಿಸುವ ಬರದಲ್ಲಿ ಬಡವರನ್ನು, ಶ್ರಮಿಕರನ್ನು ಹಂಗಿಸದಿರಿ!

  • ಎಲ್ ಕೆ ಮಂಜುನಾಥ್, ಹವ್ಯಾಸಿ ಪತ್ರಕರ್ತ(ಪೇಸ್ ಬುಕ್ ನಲ್ಲಿ ಪ್ರಕಟಿತ ಬರಹ)

Leave a Comment

Your email address will not be published. Required fields are marked *