ಸಮಗ್ರ ನ್ಯೂಸ್: ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ, ಅಂದು ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ. ರಜೆಯೆಂದು ಹೊರಗಡೆ ಸುತ್ತಾಡಲು, ಪ್ರವಾಸಕ್ಕೆ ಹೋಗಿ ಮತದಾನ ಮಾಡುವುದನ್ನು ತಪ್ಪಿಸುವುದು ಬೇಡವೆಂದು ಸರ್ಕಾರ ಹೊಸ ಮಾರ್ಗೋಪಾಯ ಕಂಡುಕೊಂಡಿದೆ.
ಅಂದು ಬಹುತೇಕ ಪ್ರವಾಸಿ ತಾಣಗಳು ಬಂದ್ ಆಗಲಿವೆ. ಪ್ರವಾಸಿ ತಾಣಗಳು ಮಾತ್ರವಲ್ಲದೆ ಹೊಟೇಲ್‍ಗಳು,
ರೆಸಾರ್ಟ್‍ಗಳಲ್ಲಿ ಸಹ ಮೇ 10ರಂದು ಬುಕ್ಕಿಂಗ್ ಗೆ ಅವಕಾಶವಿರುವುದಿಲ್ಲ. ಕಡ್ಡಾಯವಾಗಿ ಮತದಾರರು ಅಂದು ತಮ್ಮ ಹಕ್ಕು ಚಲಾಯಿಸಬೇಕೆಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ.
ಜನರು ಮತ ಚಲಾಯಿಸಿ ಬಂದು ಹೊಟೇಲ್, ರೆಸಾರ್ಟ್ ಬುಕ್ಕಿಂಗ್ ಮಾಡಿದರೆ ವಿಶೇಷ ರಿಯಾಯಿತಿ ನೀಡಲು ಅನೇಕ ಸಂಸ್ಥೆಗಳು, ಪ್ರವಾಸಿ ತಾಣಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದಾಗಿವೆ. ಆಯಾ ಜಿಲ್ಲಾಗಳಲ್ಲಿ ಪ್ರವಾಸಿ ತಾಣಗಳನ್ನು ಮೇ 10ರಂದು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೋಗ್ ಫಾಲ್ಸ್‌ಅನ್ನು ಮೇ 10ರಂದು ಮುಚ್ಚಲಾಗುತ್ತದೆ.
ಮೇ 10ಕ್ಕೆ ಶೇ.17ರಷ್ಟು ಬುಕ್ಕಿಂಗ್ ಆಗಿವೆ. ಅವರಲ್ಲಿ ಹೆಚ್ಚಿನವರು ಕರ್ನಾಟಕದ ಹೊರಗಿನವರು ಎಂದು ಜಂಗಲ್ ಲಾರ್ಡ್ಜ್ ಮತ್ತು ರೆಸಾರ್ಟ್‍ಗಳ ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್‍ನಲ್ಲಿ ಬುಕ್ಕಿಂಗ್ ಮಾಡಿದವರು ಮೇ 9 ಅಥವಾ ಮೇ 10ರ ಮುಂಜಾನೆ ಹೊರಡುತ್ತಿದ್ದಾರೆ. ಆಡಳಿತ ಮಂಡಳಿಯು ತಮ್ಮ ಸಿಬ್ಬಂದಿಗೆ ಮತ ಚಲಾಯಿಸಲು ರಜೆ ನೀಡುತ್ತಿದೆ. ಅಂದೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಬ್ಬಂದಿಗೆ ರಜೆ ನೀಡಲಾಗುವುದು.
ಮೇ 10ರಂದು ರಜಾದಿನವೆಂದು ಜನರು ಭಾವಿಸಿ ಸುತ್ತಾಡಲು ಹೋಗುವುದು, ಪ್ರವಾಸಕ್ಕೆ ಹೋಗುವುದು ಮಾಡಬಾರದು. ಆ ದಿನ ಬುಕ್ಕಿಂಗ್ ಮಾಡಿಕೊಳ್ಳದಂತೆ ನಾವು ಹೇಳುತ್ತೇವೆ. ನಮ್ಮ ಸಿಬ್ಬಂದಿಗಳು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬುದು ನಮ್ಮ ಉದ್ದೇಶ ಎಂದು ಚುನಾವಣಾ ಅಧಿಕಾರಿಗಳು ಹೇಳುತ್ತಾರೆ.