ಸಮಗ್ರ ನ್ಯೂಸ್: ಆತನ ವಯಸ್ಸು 26, ದಾಖಲಾಗಿರುವ ಪ್ರಕರಣಗಳು 40, ಆಸ್ತಿ 29 ಕೋಟಿ, ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಫೇಲ್, ಅಂಗನವಾಡಿ ಮಕ್ಕಳಿಗೆ ಹಂಚುವ ಹಾಲಿನ ಪುಡಿ, ಪಡಿತರ ಅಕ್ಕಿ ಕಳ್ಳ ಸಾಗಣೆ ಆರೋಪ ಎದುರಿಸುತ್ತಿರುವ ಈತ ಈ ಬಾರಿಯ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿ.
ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್. ಬಿಜೆಪಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಅಸಮಾಧಾನ ಹೊರಹಾಕಿವೆ. ಇಂತಹ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಬೇಕೆ? ಎಂದು ಬಿಜೆಪಿಗೆ ಪ್ರಶ್ನೆ ಮಾಡಿವೆ.
ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ. ಇವರ ಎದುರಾಳಿಯಾಗಿ ಮಣಿಕಂಠ ರಾಠೋಡ್‌ರನ್ನು ಬಿಜೆಪಿ ಕಣಕ್ಕಿಳಿಸಿದೆ. ರೌಡಿ ಶೀಟರ್ ಆಗಿರುವ ಅಭ್ಯರ್ಥಿ ವಿರುದ್ಧ 40 ಪ್ರಕರಣಗಳು ದಾಖಲಾಗಿವೆ ಎಂದು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಕರ್ನಾಟಕ ಕಾಂಗ್ರೆಸ್ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ವಿರುದ್ಧ ಟ್ವೀಟ್ ಮಾಡಿದೆ. ‘ಬಿಜೆಪಿಗೆ ಅರ್ಹವಾದ ಅಭ್ಯರ್ಥಿ ಸಿಕ್ಕಿದ್ದಾನೆ!. ಕಳ್ಳರಿಗೆ, ಸುಳ್ಳರಿಗೆ, 40% ಕಮಿಷನ್ ದರೋಡೆಕೋರರಿಗೆ ಮಾತ್ರ ಬಿಜೆಪಿಯಲ್ಲಿ ಜಾಗ. ಬಡವರ ಅಕ್ಕಿ ಕಳ್ಳ, ಅಂಗನವಾಡಿ ಮಕ್ಕಳ ಹಾಲಿನಪುಡಿಯ ಕಳ್ಳನ ಪರ ಪ್ರಧಾನಿ ಮತ ಕೇಳುವುದು ಈ ದೇಶಕ್ಕೆ ಕಳಂಕ. ನರೇಂದ್ರ ಮೋದಿ ಅವರು ಪ್ರಧಾನಿಯೋ ಅಥವಾ ಕಳ್ಳಕಾಕರ ಪ್ರತಿನಿಧಿಯೋ ಅರ್ಥವಾಗುತ್ತಿಲ್ಲ!’ ಎಂದು ಬಿಜೆಪಿಗೆ ತಿರುಗೇಟು ನೀಡಿದೆ.