ಸಮಗ್ರ ನ್ಯೂಸ್: ಬಿಸಿಲ ಬೇಗೆಗೆ ಬಸವಳಿದ ಭೂಮಿಗೆ ಇಂದು ಮಳೆಯ ಹನಿ ಮುತ್ತಿಕ್ಕಿದೆ. ದ.ಕ ಜಿಲ್ಲೆಯ ಕೆಲವೆಡೆ ಸಾಧಾರಣದಿಂದ ಭಾರೀ ಮಳೆಯಾಗಿದ್ದು, ತಾಪಮಾನ ಕೊಂಚ ಇಳಿಕೆಯಾಗಿದೆ.
ಸುಳ್ಯ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ. ಮಧ್ಯಾಹ್ನದ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾದ ವರದಿಗಳು ಬಂದಿವೆ. ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಮಣ್ಯದಲ್ಲಿ ಸಂಜೆ ವೇಳೆಗೆ ದಿಢೀರ್ ಮಳೆಯಾಗಿದ್ದು, ವಾತಾವರಣ ಕೂಲ್ ಆಗಿದೆ.
ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲಮೊಗ್ರು ಕಲ್ಮಕಾರು, ಹರಿಹರ ಪಲ್ಲತ್ತಡ್ಕ, ಐನೆಕಿದು, ಗುತ್ತಿಗಾರು, ಬಳ್ಪ, ಯೇನೆಕಲ್ಲು, ಕೈಕಂಬ, ಪಂಜ ಸೇರಿದಂತೆ ಕೆಲವೆಡೆ ಉತ್ತಮ ಮಳೆಯಾಗಿದೆ. ಸುಳ್ಯದಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಕೇವಲ ಐದು ನಿಮಿಷದ ಹನಿ ಮಳೆಯಾಗಿದ್ದು, ಬಳಿಕ ಮೋಡ ಕವಿದ ವಾತವರಣ ಕಂಡುಬಂದಿದೆ.
ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಗೆ ಬಸವಳಿದಿದ್ದ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಲಾಯಿಲ, ದಿಡುಪೆ, ನಡ,ಕಲ್ಮಂಜ, ಚಿಬಿದ್ರೆ, ಚಾರ್ಮಾಡಿ, ಕಡಿರುದ್ಯಾವರ ಮೊದಲಾದ ಗ್ರಾಮಗಳ ಜನತೆಗೆ ಮಂಗಳವಾರ ಸುರಿದ ಸಾಮಾನ್ಯ ಮಳೆ ಒಂದಿಷ್ಟು ತಂಪೆರೆಯಿತು.
ಸಂಜೆ 5ರ ಹೊತ್ತಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಸಾಮಾನ್ಯವಾಗಿ ಸುರಿಯಿತು.ಉಳಿದ ಕೆಲವು ಗ್ರಾಮಗಳಲ್ಲಿ ತುಂತುರು ಮಳೆ ಸುರಿದಿದೆ. ಏ.7ರಂದು ತಾಲೂಕಿನ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿತ್ತು.ಮತ್ತೆ 18ದಿನಗಳ ಬಳಿಕ ಮಂಗಳವಾರ ಮಳೆ ಸುರಿದಿದೆ.
ಕಡಬ ತಾಲೂಕಿನ ಕೊಂಬಾರು, ಸಿರಿಬಾಗಿಲು, ಕೊಣಾಜೆ, ಕಲ್ಲುಗುಡ್ಡೆ, ಬಿಳಿನೆಲೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಗುಂಡ್ಯದಲ್ಲಿ ಬೀಸಿದ ಭಾರೀ ಗಾಳಿಗೆ ಅಂಗಡಿ ಮೇಲೆ ಮರ ಬಿದ್ದು ತೊಂದರೆ ಉಂಟಾಯಿತು. ಒಟ್ಟಾರೆ ಸುರಿದ ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ಬಿಸಿಲ ಬೇಗೆ ಇಳಿದಿದೆ.