ಸಮಗ್ರ ನ್ಯೂಸ್: ರಾಜ್ಯದ ವಿವಿಧೆಡೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ಮಾಡಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕೆಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೀದರ್, ಕೋಲಾರ, ಬಳ್ಳಾರಿ ಸೇರಿದಂತೆ ಕೆಲ ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ದಾಖಲಾತಿಗಳ ಪರಿಶೀಲನೆ ಮುಂದುವರೆಸಿದ್ದಾರೆ.
ಬೀದರ್ ಜಿಲ್ಲೆಯ 6 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಬಸವಕಲ್ಯಾಣ ತಾಲೂಕಿನ ಮುಡಬಿಯ ಉಪ ತಹಶೀಲ್ದಾರ್ ವಿಜಯಕುಮಾರ್ ಸ್ವಾಮಿ ಮನೆಗಳ ಮೇಲೆ ದಾಳಿ ನಡೆದಿದೆ. ಬೀದರ್‌ನ ಆನಂದ್ ನಗರ ಮನೆ, ಬಸವಕಲ್ಯಾಣದ ಮನೆ, ಕಚೇರಿ, ನಗರದ ಗ್ಯಾರೆಜ್ ಮೇಲೂ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಇಇ ಸುರೇಶ್ ಮೇದಾ ಅವರ ಬೀದರ್‌ನ ಗುರುನಗರದ ಮನೆ, ನೌಬಾದ್ನ ಕಚೇರಿಯಲ್ಲಿ ಪರಿಶೀಲನೆ ನಡೆಯುತ್ತಿದೆ. ಜೊತೆಗೆ ಸುರೇಶ್ ಮೇದಾ ಸಣ್ಣ ನೀರಾವರಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ನಿವಾಸ ಹಾಗೂ ಕಚೇರಿ ಮೇಲೆ ಹಾಗೂ ಬೀದರ್‌ನ ಗುರುನಗರದ ನಿವಾಸ ಹಾಗೂ ನೌಬಾದ್‌ನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಎನ್.ಎಂ.ಓಲೇಕಾರ್ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಕೋಲಾರ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ (EO) ಎನ್.ವೆಂಕಟೇಶಪ್ಪ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಬಂಗಾರಪೇಟೆ ಪಟ್ಟಣದಲ್ಲಿ ಮೂರು ಕಡೆ, ಮುಳಬಾಗಿಲು ತಾಲ್ಲೂಕು ತಿಪ್ಪದೊಡ್ಡಿ ಎರಡು ಕಡೆ ದಾಳಿ ನಡೆಸಿದ್ದಾರೆ. ಒಟ್ಟು ವೆಂಕಟೇಶಪ್ಪಗೆ ಸೇರಿದ ಐದು ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದು, ಕಳೆದ ಎಂಟು ವರ್ಷಗಳಿಂದ ಬಂಗಾರಪೇಟೆ ತಾಲ್ಲೂಕು ಪಂಚಾಯ್ತಿ ಇಓ ಆಗಿ ವೆಂಕಟೇಶಪ್ಪ ಕೆಲಸ ಮಾಡುತ್ತಿದ್ದರು.