ಬಂಟ್ವಾಳ: ಗ್ರಾಮ ಪಂಚಾಯತ್ ವತಿಯಿಂದ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಿಲ್ಲವೆಂದು ವಿಧವೆ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಸ್ಮಶಾನದಲ್ಲಿ ಮನೆ ಕಟ್ಟಿ ಕುಳಿತ ಘಟನೆ ಅನಂತಾಡಿ ಗ್ರಾಮದ ಬಂಟ್ರಿಂಜೆಯಲ್ಲಿ ನಡೆದಿದೆ. ಇದೀಗ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಗ್ರಾಮ ಪಂಚಾಯತ್ ದೂರು ದಾಖಲಿಸಿದೆ.
ಹಲವಾರು ಭಾರಿ ಅರ್ಜಿ ಸಲ್ಲಿಸಿದರು ಗ್ರಾಮ ಪಂಚಾಯತ್ ನಮಗೆ ಮನೆ ನಿವೇಶನ ಮಂಜೂರು ಮಾಡಿಲ್ಲವೆಂದು ಮಹಿಳೆ ಆರೋಪಿಸಿದ್ದಾರೆ. ದಿ. ರಾಮಚಂದ್ರ ದಾಸ್ ಎಂಬವರ ಪತ್ನಿ, ಜಯಂತಿ ಇದುವರೆಗೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಈಗ ಸ್ಮಶಾನಕ್ಕಾಗಿ ಕಾಯಿದಿರಿಸಿದ ಜಾಗದಲ್ಲಿ ಶೀಟ್ ಹಾಕಿ, ತಾತ್ಕಾಲಿಕ ಶೆಡ್ ನಿರ್ಮಿಸಿದ್ದಾರೆ. ಸ್ಮಶಾನಕ್ಕಾಗಿ ಕಾದಿರಿಸಿದ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಯಂತಿ, ಗ್ರಾಪಂ ಅಧಿಕಾರಿಗಳಿಂದ ನನಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ತನಗೆ ಸೂರು ಬೇಕೆಂದು ಸರ್ಕಾರಿ ಜಾಗದಲ್ಲಿ ವಾಸ್ತವ್ಯ ಹೂಡಿದ್ದೇನೆ ಎಂದಿದ್ದಾರೆ. ಆದರೆ, ಜಯಂತಿ ಅವರು ಸ್ಮಶಾನಕ್ಕಾಗಿ ಮೀಸಲಿರಿಸಿದ್ದ ಜಾಗದಲ್ಲಿ ಶೆಡ್ ನಿರ್ಮಿಸಿದ್ದು ಸರಿಯಲ್ಲ ಎಂದು ಪಿಡಿಒ ಆರೋಪಿಸಿದ್ದಾರೆ.