ಸಮಗ್ರ ನ್ಯೂಸ್: ಬೆಂಗಳೂರು, ಮಂಗಳೂರು ಸೇರಿದಂತೆ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಅಥವಾ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇಂದು ಶುಕ್ರವಾರ ರಾಜ್ಯದ ಕೆಲವು ಕಡೆಗಳಲ್ಲಿ ಒಣಹವೆ, ಪ್ರಖರ ಬಿಸಿಲು ಮುಂದುವರೆಯಲಿದೆ. ಗುರುವಾರ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೆಲವು ಕಡೆ ಚುನಾವಣಾ ಸಮಾವೇಶಗಳಲ್ಲಿ ಅನಿರೀಕ್ಷಿತ ಮಳೆಯು ಬಿಸಿಲಲ್ಲಿ ಬೆಂದ ಕಾರ್ಯಕರ್ತರನ್ನು ತಂಪಾಗಿಸಿದೆ. ಬೆಳಗಾವಿಯಲ್ಲಿ ಗಾಳಿಸಹಿತ ಮತ್ತು ಗದಗದಲ್ಲಿ ಗುಡುಗು ಸಹಿತ ಮಳೆಯಾಗಿದೆ.
ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ವಾಡಿಕೆಗಿಂತ 2ರಿಂದ 3 ಡಿಗ್ರಿ ಹೆಚ್ಚಿರಲಿದೆ.