ಸಮಗ್ರ ನ್ಯೂಸ್: ರಾಜ್ಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೋಟಿ ಕೋಟಿ ಹಣ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಳು ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಆದರೆ ಆ ಹಣ ಕೆಲ ಹೊತ್ತಲ್ಲಿ ನಾಪತ್ತೆಯಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಳು ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದ ನಂತರ ಆ ಹಣ ಮಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಾಧ್ಯಮಗಳ ಮೂಲಕ ಮಾಹಿತಿ ಪಡೆದ ದಕ್ಷಿಣ ವಿಭಾಗದ ಪೊಲೀಸರು ನಗದು ಪತ್ತೆಯಾದ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಸೋಮವಾರ ತಡರಾತ್ರಿ ಪೊಲೀಸರು ವಾಹನಗಳ ತಪಾಸಣೆ ನಡೆಸುವ ವೇಳೆ ಏಳು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಅಚ್ಚರಿ ಎಂದರೆ ಹಣ ಪತ್ತೆಯಾಗುತ್ತಿದ್ದಂತೆ ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದಿದ್ದು, ಬಳಿಕ ಹಣ ಎಲ್ಲಿ ಹೋಗಿದೆ ಎಂಬುದು ನಿಗೂಢವಾಗಿದೆ.
ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಬಂದ ಬಳಿಕ ಪತ್ತೆಯಾದ ಅತೀ ದೊಡ್ಡ ಮೊತ್ತದ ಹಣ ಇದಾಗಿದ್ದು, ಇದರ ನಾಪತ್ತೆ ಕಾರಣ ಪತ್ತೆಹಚ್ಚಲು ಅಧಿಕಾರಿಗಳು ಬಲೆ ಬೀಸಿದ್ದಾರೆ.