ಸಮಗ್ರ ನ್ಯೂಸ್: ಮಂಗಳೂರು ನಗರದ ನೆಹರೂ ಮೈದಾನದ ಬಳಿಯ ಫುಟ್ಬಾಲ್ ಗ್ರೌಂಡ್ನಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮಂಗಳವಾರ(ಎ.12) ಬಿಜೆಪಿ ಕಾರ್ಯಕರ್ತ 45 ವರ್ಷದ ಜನಾರ್ದನ ಬರಿಂಜ್ ಎಂಬವರ ಶವ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ. ಜನಾರ್ದನ್ ಅವರು ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಅಮ್ಮುಂಜೆಯ ನಿವಾಸಿಯಾಗಿದ್ದು, ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನ ಮೈದಾನದಲ್ಲಿ ಜನಾರ್ದನ್ ಕುಳಿತಿರುವಾಗ ಬಂದ ಹಂತಕರು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದರೋಡೆ ಮಾಡಲು ಬಂದವರೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಯ ವಿಷಯ ತಿಳಿಯುತ್ತಿದ್ದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ನಾಲ್ವರ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.