ಸಮಗ್ರ ನ್ಯೂಸ್: ಭಾಷಣದ ಆವೇಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಎಡವಟ್ಟಿನ ಹೇಳಿಕೆ ನೀಡಿದ್ದಾರೆ. ನಿನ್ನೆ ಕೋಲಾರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ‘ರಾಜ್ಯದ ಮಾನ ಮರ್ಯಾದೆ ತೆಗೆದದ್ದು ಕಾಂಗ್ರೆಸ್’ ಎಂದು ಹೇಳಿದ್ದಾರೆ. ಬಳಿಕ ಸರಿಪಡಿಸಿಕೊಂಡ ಅವರು ಮಾತು ಮುಂದುವರೆಸಿದರು.
ಮೇ ೧೦ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಮಾಡಲು ಅವಕಾಶ ಕೊಟ್ಟರೆ ಈ ರಾಜ್ಯದ ಜನರ ನೆಲ ಜಲ ಭಾಷೆಯನ್ನು ರಕ್ಷಣೆ ಮಾಡ್ತಾರೆ ಎಂಬುದನ್ನು ವಿಚಾರ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕೇಂದ್ರದಲ್ಲಿ ಕಳೆದ 9 ವರ್ಷಗಳಿಂದ ಬಿಜೆಪಿ ಆಡಳಿತ ಮಾಡುತ್ತಿದೆ. ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗಿದ್ದಾರೆ. ಮೊದಲು ಕುಮಾರಸ್ವಾಮಿಗಳು, 2 ವರ್ಷ ಯಡಿಯೂರಪ್ಪ ನಂತರದ 2 ವರ್ಷ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರದಲ್ಲಿ ನಡೆದ ಜೈ ಭಾರತ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಅವರು ನಮ್ಮದು ಡಬಲ್ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿ ವೇಗವಾಗಿ ಆಗಲಿದೆ ಎಂದು ಹೇಳಿದ್ದರು. ಈ ಡಬಲ್ ಇಂಜಿನ್ ಸರ್ಕಾರ ಬಂದ ನಂತರ ರಾಜ್ಯ ಇಷ್ಟು ಕೆಟ್ಟ ಹೆಸರನ್ನು ಹಿಂದೆಂದೂ ತೆಗೆದುಕೊಂಡಿರಲಿಲ್ಲ. ಬಿಜೆಪಿ ಸರ್ಕಾರ ರಾಜ್ಯದ ಘನತೆ ಹಾಳು ಮಾಡಿದೆ. ಗುತ್ತಿಗೆದಾರರ ಸಂಘ, ಅನುದಾನರಹಿತ ಶಿಕ್ಷಣ ಸಂಸ್ಥೆ ರುಪ್ಸಾದವರು ರಾಜ್ಯದಲ್ಲಿ ಪ್ರತಿ ಕೆಲಸಕ್ಕೆ ಈ ಸರ್ಕಾರ 40% ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಅಷ್ಟರ ಮಟ್ಟಿಗೆ ಬಿಜೆಪಿ ಸರ್ಕಾರ ರಾಜ್ಯದ ಗೌರವ ಹಾಳು ಮಾಡಿದೆ. ಈ ಬಗ್ಗೆ ಜನ ಬೀದಿ ಬೀದಿಗಳಲ್ಲಿ ಮಾತನಾಡುತ್ತಿದ್ದಾರೆ. ಇಂತಹ ಭ್ರಷ್ಟಾ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಬಂದಿರಲಿಲ್ಲ ಎಂದರು.