Samagra news: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭೇಟಿಯ ವೇಳೆ ‘ಜೆಡಿಎಸ್ ಸಣ್ಣ ಪಕ್ಷ . ನಮ್ಮ ಪಕ್ಷಕ್ಕೆ ಜಗದೀಶ್ ಶೆಟ್ಟರ್ ಅವರಂತಹ ದೊಡ್ಡ ನಾಯಕರ ಅವಶ್ಯಕತೆಯಿಲ್ಲ’ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಶ್ರೀಮಂಜುನಾಥ ಸ್ವಾಮಿ ಹಾಗೂ ಪರಿವಾರ ದೇವರ ದರ್ಶನ ಪಡೆದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಗೆ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಶೆಟ್ಟರ್ ಅವರ ರಾಜಿನಾಮೆ ಬಿಜೆಪಿಯ ಆಂತರಿಕ ವಿಚಾರ. ಅವರೊಬ್ಬ ಅನುಭವಿ ರಾಜಕಾರಣಿ. ಜನಸಂಘ ಇರುವಾಗಿನಿಂದಲೇ ಬಿಜೆಪಿಗಾಗಿ ಕೆಲಸ ಮಾಡಿದವರು. ಅವರಂಥವರೇ ಇಂಥ ನಿರ್ಧಾರ ಕೈಗೊಂಡಿದ್ದಾರೆ.
ನಾನು ಬಿಜೆಪಿಯ ಡಿಎನ್ಎ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದೆ. ಬಹುಶಃ ಅದು ಬಿಜೆಪಿಯಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ನನ್ನ ಅನಿಸಿಕೆ’ ಎಂದರು. ಕುಮಾರಸ್ವಾಮಿ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ವೀರೇಂದ್ರ ಹೆಗ್ಗಡೆಯವರು ಕುಮಾರಸ್ವಾಮಿ ಅವರಿಗೆ ಬೆಳ್ಳಿಯ ರುದ್ರಾಕ್ಷಿ ಮಾಲೆ ಹಾಕಿದರು.