Samagra news:ಸಮಾಜದೊಂದಿಗೆ ಉತ್ತಮ ಭಾಂದವ್ಯವನ್ನು ಇಟ್ಟುಕೊಳ್ಳಲು ಸಾಮಾಜಿಕ ಕಾರ್ಯಗಳು ವೇದಿಕೆಯಾಗಿವೆ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.
ಬಣಕಲ್ ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ವಿಷು ಹಬ್ಬದ ಪ್ರಯುಕ್ತ ಮೂಡಿಗೆರೆ ಎಂಜಿಎಂ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆರೋಗ್ಯಪೂರ್ಣ ಸ್ವಸ್ಥ ಹಾಗೂ ಸದೃಡ ಸಮುದಾಯವನ್ನಾಗಿ ರೂಪಿಸುವುದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಉದ್ದೇಶವಾಗಿದೆ. ಸಮುದಾಯದ ಸರ್ವಾಂಗೀಣ ಅಭಿವೃದ್ದಿಯ ಸಂಘದ ಮೂಲ ಮಂತ್ರವಾಗಿದೆ. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದು, ಸಮುದಾಯದ ಜನರನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಂಘಟಿಸುವುದರ ಜೊತೆಗೆ ಸಮುದಾಯದ ಸಬಲೀಕರಣಕ್ಕೆ ಶ್ರಮಿಸುವ ಉದ್ದೇಶವನ್ನು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘವು ಹೊಂದಿದೆ ಎಂದರು.
ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂಭವಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘವೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆಸ್ಪತ್ರೆಯ ಹಿರಿಯ ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಅವರ ಸೇವಾಮನೋಭಾವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಮೂಡಿಗೆರೆ ಎಂಜಿಎಂ ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂಭವಿ, ಶುಶ್ರೂಷಕಿಯರಾದ ವೇದಾವತಿ, ವನಿತಾಕುಮಾರಿ, ಆಸ್ಪತ್ರೆಯ ಸಿಬ್ಬಂದಿಗಳಾದ ನಾಗೇಶ್, ಪ್ರಮೀಳಮ್ಮ, ಜಮೀಲಾಭಾನು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಪದಾಧಿಕಾರಿಗಳು, ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.