ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದ ಸುಳ್ಯ ಶಾಸಕ ಎಸ್.ಅಂಗಾರ ನಿವೃತ್ತಿಯ ಮಾತುಗಳನ್ನಾಡಿದ್ದರು.
ಆದರೆ ಇಂದು ವರಸೆ ಬದಲಿಸಿದ ಸಚಿವ ಎಸ್.ಅಂಗಾರ, ಮೊನ್ನೆ ದಿನ ನಾನು ರಾಜಕೀಯ ನಿವೃತ್ತಿಯ ಹೇಳಿಕೆ ನೀಡಿದ್ದೆ. ಅದು ತತ್‌ಕ್ಷಣದ ನೋವಾಗಿತ್ತು. ಇದೀಗ ನನ್ನ ಹೇಳಿಕೆಯನ್ನು ನಾನು ಹಿಂಪಡೆಯುತ್ತಿದ್ದು, ರಾಜಕೀಯದಲ್ಲಿ ಈ ಹಿಂದಿನಂತೆ ಸಕ್ರಿಯನಾಗಿರುತ್ತೇನೆ. ಜತೆಗೆ ನಮ್ಮ ಅಭ್ಯರ್ಥಿ ಭಾಗೀರಥಿಯವರ ಗೆಲುವಿನ ಜವಾಬ್ದಾರಿ ನಾನೇ ತೆಗೆದುಕೊಳ್ಳವುದಾಗಿ ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಅಭ್ಯರ್ಥಿ ಆಯ್ಕೆಯಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ. ಆದರೆ ನನಗೆ ಹೇಳದೇ ಆಯ್ಕೆ ಮಾಡಿರುವುದು ಸಣ್ಣ ನೋವಾಗಿತ್ತು. ಅದು ತತ್ ಕ್ಷಣದ ನೋವಷ್ಟೆ. ಆಗ ನಾನೂ ಆ ರೀತಿ ಹೇಳಿಕೆ ನೀಡಿದೆ. ಬಳಿಕ ಯೋಚಿಸಿದಾಗ ನನ್ನ ನಿರ್ಧಾರದ ಅರಿವು ನನಗಾಗಿ ಆ ಹೇಳಿಕೆ ಹಿಂಪಡೆದಿದ್ದೇನೆ. ಪಕ್ಷದಲ್ಲಿ ಸಕ್ರಿಯನಾಗಿರುತ್ತೇನೆ. ಮತ್ತು ಪಕ್ಷ ಘೋಷಣೆ ಮಾಡಿದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಾನೇ ತೆಗೆದು ಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಮುನಿಸಿಕೊಂಡಿದ್ದ ಎಸ್.ಅಂಗಾರ ನಾನು ಯಾವ ರಾಜಕೀಯದಲ್ಲೂ ಇಲ್ಲ, ಯಾರ ಪರವಾಗಿಯೂ ಕೆಲಸ ಮಾಡಲ್ಲ ಎಂದು ಹೇಳಿದ್ದರು. ಸಚಿವರ ಈ ಹೇಳಿಕೆ ವಿರುದ್ದ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಚಿವರು ಸ್ಪಷ್ಟನೆ ನೀಡಿದ್ದು, ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ.