ಸಮಗ್ರ ನ್ಯೂಸ್: ಮಗುವಿಗೆ ಜನ್ಮನೀಡುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿ ಕಡಿಯದೇ ವಿಪರೀತ ರಕ್ತಸ್ರಾವದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ತಾಯಿ-ಮಗುವನ್ನು ಅಂಬ್ಯುಲೆನ್ಸ್ ಡ್ರೈವರ್ ಒಬ್ಬರು ಕಾಪಾಡಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ಅಸ್ಸಾಂ ಮೂಲದ ಕುಟುಂಬಗಳು ಕೂಲಿ ಕೆಲಸಕ್ಕೆಂದು ಬಂದು ವಾಸ್ತವ್ಯವಿದ್ದಾರೆ. ಈ ಪೈಕಿ ಒಂದು ಕುಟುಂಬ ಸಣ್ಣ ಟೆಂಟ್ ಹಾಕಿಕೊಂಡು ಅಲ್ಲಿಯೇ ಜೀವನ ನಡೆಸಿಕೊಂಡು ಬರುತ್ತಿದೆ. ಆ ಪುಟ್ಟ ಕುಟುಂಬದ ಮಹಿಳೆಯೊಬ್ಬಳು ತುಂಬು ಗರ್ಭಿಣಿಯಾಗಿದ್ದು ಆಕೆಗೆ ಕಳೆದ ರಾತ್ರಿ(ಎ.10) ಹೆರಿಗೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗುತ್ತದೆ. ಆದರೆ ಆ ವೇಳೆಗಾಗಲೇ ಟೆಂಟ್‌ನೊಳಗೆಯೇ ಆಕೆ ಮಗುವಿಗೆ ಜನ್ಮ ನೀಡಿರುತ್ತಾಳೆ. ಆದರೆ ಮಗುವಿನ ಜನನ ಸಂದರ್ಭದಲ್ಲಿ ಹೊಕ್ಕಳ ಬಳ್ಳಿ ಕಡಿದುಕೊಳ್ಳದೆ ಮಗು ಪ್ರಪಂಚಕ್ಕೆ ಕಾಲಿರಿಸಿತ್ತು. ವಿಪರೀತ ರಕ್ತ ಸ್ರಾವದಿಂದ ಮಹಿಳೆ ನರಳುತ್ತಿದ್ದಳು. ಆ ತಡರಾತ್ರಿ ವೈದ್ಯರನ್ನು ಕರೆದುಕೊಂಡು ಬರುವುದು ಕಷ್ಟದ ವಿಚಾರ ಆಗಿತ್ತು.
ಈ ವೇಳೆ ಸಮಾಜ ಸೇವಕ ಚಂದ್ರಶೇಖರ ಕಡೋಡಿಯವರ ಮೂಲಕ ಅಮರ ಸುಳ್ಯ ಚಾರಿಟೇಬಲ್ ಟ್ರಸ್ಟ್ ಆಂಬ್ಯುಲೆನ್ಸ್‌ನಲ್ಲಿ ನಾಜೂಕಾಗಿ ಡ್ರೈವ್ ಮಾಡಿಕೊಂಡು ಸುಳ್ಯದ ಸರಕಾರಿ ಆಸ್ಪತ್ರೆಗೆ ತಾಯಿ- ಮಗುವನ್ನು ಕರೆದುಕೊಂಡು ಬರಲಾಯಿತು. ಪ್ರಯಾಣದ ದಾರಿಯುದ್ಧಕ್ಕೂ ತಾಯಿಯ ಕಾಲಿನ ಮೇಲೆ ಮಲಗಿಸಿ ಮಗುವನ್ನು ಮಲಗಿಸಿಕೊಂಡು ಬರಲಾಗುತ್ತದೆ. ಒಂದು ಕಡೆ ಮಗುವಿನ ಅಳು, ಮತ್ತೊಂದು ಕಡೆ ತಾಯಿಗೆ ಆಗುತ್ತಿರುವ ರಕ್ತಸ್ರಾವದಿಂದ ಸ್ವತಃ ಕಡೋಡಿಯವರು ಕೂಡ ಗಾಬರಿಯಾಗಿದ್ದರು. ಆದರೆ ಕಡೋಡಿಯವರು ಯಶಸ್ವಿಯಾಗಿ ತಾಯಿ-ಮಗುವನ್ನು ತಡರಾತ್ರಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ತಾಯಿ ಹಾಗೂ ಗಂಡು ಮಗು ಚಿಕಿತ್ಸೆಯ ನಂತರ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ತಾಯಿ ಮಗುವನ್ನು ಸಾವಿನಿಂದ ಕಾಪಾಡಿದ ಚಂದ್ರಶೇಖರರ ಈ ಸಾಹಸಕ್ಕೆ ನಾಗರಿಕ ಸಮಾಜ ಅಭಿನಂದನೆ ಸಲ್ಲಿಸಿದೆ.