ಬೆಂಗಳೂರು: ನಾಳೆಯಿಂದಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು ಜುಲೈ 1ರಿಂದ ಶಾಲೆಗಳು ಆರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
ಶೈಕ್ಷಣಿಕ ವರ್ಷದ ಆರಂಭದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾಳೆಯಿಂದಲೇ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಜೊತೆಗೆ ಜುಲೈ 1ರಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗಲಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.
ನಾಳೆಯಿಂದ ಮಕ್ಕಳ ಶಾಲಾ ದಾಖಲಾತಿಯನ್ನು ಪ್ರಾರಂಭಿಸಿ, ಆಗಸ್ಟ್ 31ರ ಒಳಗೆ ದಾಖಲಾತಿ ಮುಕ್ತಾಯಗೊಳಿಸಬೇಕು. ಲಾಕ್‌ಡೌನ್ ಇರುವ ಜಿಲ್ಲೆಗಳಲ್ಲಿ ಪಾಸ್ ಪಡೆದು ಶಾಲೆಗೆ ಬರಬೇಕು. ಈಗಾಗಲೇ ಒಂದು ಶೈಕ್ಷಣಿಕ ವರ್ಷ ತಡವಾಗಿದೆ. ಶಿಕ್ಷಕರು ಅನ್ಯ ಕಾರಣ ನೀಡುವಂತಿಲ್ಲ. ಕೊವಿಡ್ ಸಮಯದಲ್ಲಿ ವೈದ್ಯರು ಪೌರಕಾರ್ಮಿಕರ ಮಾದರಿಯಲ್ಲಿ ಶಿಕ್ಷಕರು ಕೆಲಸ ಮಾಡಬೇಕು ಎಂದು ಅನ್ಬುಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಶೈಕ್ಷಣಿಕ ವರ್ಷ ಮುಂದೂಡುವ ಪ್ರಶ್ನೆಯೇ ಇಲ್ಲ. ಕೊವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್‌ಲೈನ್, ದೂರದರ್ಶನ, ಅಂತರ್ಜಾಲ ಕಲಿಕೆಯನ್ನು ನೀಡಬೇಕಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.