ಸಮಗ್ರ ನ್ಯೂಸ್: ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಹಿರಿಯ ನಾಯಕರಿಗೆ ಟಿಕೆಟ್ ನೀಡದೇ, ಹೊಸಬರಿಗೆ ಹಾಗೂ ಯುವಕರಿಗೆ ಮಣೆ ಹಾಕಲಾಗಿತ್ತು. ಅದೇ ಮಾದರಿ, ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ರಾಜ್ಯಕ್ಕೂ ಕಾಲಿಟ್ಟಿದೆ ಎನ್ನಲಾಗುತ್ತಿದೆ.
ಬಿಜೆಪಿ ಹೈಕಮಾಂಡ್ ಹಿರಿಯರಿಗೆ ಕೋಕ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಈ ಸುಳಿವಿನಿಂದಲೇ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕದಲ್ಲೂ ಗುಜರಾತ್ ಮಾದರಿನ್ನೇ ಅನುಸರಿಸೋದಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗುತ್ತಿದೆ. ರಾಜ್ಯದ ಬಿಜೆಪಿಯ ಹಿರಿಯ ನಾಯಕರಿಗೆ ಹೈಕಮಾಂಡ್ ಕೋಕ್ ನೀಡಿ, ಹೊಸ ತಲೆ ಮಾರಿನ ನಾಯಕರಿಗೆ ಮಣೆ ಹಾಕುವ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಈ ಬಾರಿ ಟಿಕೆಟ್ ನೀಡುವುದಿಲ್ಲ ಎಂಬುದಾಗಿ ಸ್ಪಷ್ಟ ಸಂದೇಶವನ್ನು ಹೈಕಮಾಂಡ್ ರವಾನಿಸಿತ್ತು ಎನ್ನಲಾಗಿದೆ. ಈ ಕಾರಣದಿಂದಾಗಿಯೇ ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರೇ, ಇದೀಗ ದಿಢೀರ್ ಧಾರವಾಡದಿಂದ ಬೆಂಗಳೂರಿಗೆ ಜಗದೀಶ್ ಶೆಟ್ಟರ್ ದೌಡಾಯಿಸುತ್ತಿದ್ದಾರೆ.
ಇನ್ನೂ ಸಚಿವ ಸೋಮಣ್ಣ ಅವರು ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅವರಿಗೂ ಬಿಜೆಪಿ ಹೈಕಮಾಂಡ್ ನೀವು ನಿವೃತ್ತಿ ಘೋಷಿಸಿದ್ರೇ, ನಿಮ್ಮ ಪುತ್ರನಿಗೆ ಟಿಕೆಟ್ ನೀಡಲಾಗುತ್ತದೆ. ಒಂದು ಕುಟುಂಬಕ್ಕೆ ಒಬ್ಬರಿಗೇ ಟಿಕೆಟ್ ಎಂಬುದಾಗಿ ಷರತ್ತು ವಿಧಿಸಿದೆ ಎಂಬುದಾಗಿ ಪಕ್ಷದ ಹಿರಿಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಈಗಾಗಲೇ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದರು. ದಾವಣಗೆರೆ ಉತ್ತರ ಕ್ಷೇತ್ರದ ಹಿರಿಯ ಶಾಸಕ ಎಸ್ ಎ ರವೀಂದ್ರನಾಥ್ ತಾವು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು. ಅಲ್ಲದೇ ತಮ್ಮ ಕುಟುಂಬದ ಯಾರಿಗೂ ಟಿಕೆಟ್ ಬೇಡ ಎಂಬುದಾಗಿ ಹೇಳಿದ್ದರು.
ಈ ಬಾರಿ ಹಿರಿಯ ನಾಯಕರಿಗೆ ಚುನಾವಣೆಗೆ ನಿಲ್ಲೋದಕ್ಕೆ ಟಿಕೆಟ್ ನೀಡುವುದಿಲ್ಲ ಎಂಬುದಾಗಿ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ ಎಂಬುದಾಗಿ ಹೇಳಲಾಗುತ್ತಿದ್ದು, ಈ ಕಾರಣದಿಂದಾಗಿ ಬಿಜೆಪಿಯ ಹಿರಿಯ ನಾಯಕರು ಒಬ್ಬೊಬ್ಬರಾಗಿ ಚುನಾವಣಾ ನಿವೃತ್ತಿ ಘೋಷಣೆ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲೂ ಗುಜರಾತ್ ಮಾದರಿಯ ನಡೆಯನ್ನು ಬಿಜೆಪಿ ಹೈಕಮಾಂಡ್ ಪ್ರದರ್ಶಿಸಲಿದ್ಯಾ ಎಂಬುದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ನಂತರ ಮತ್ತಷ್ಟು ಖಚಿತವಾಗಲಿದೆ.