ಸಮಗ್ರ ನ್ಯೂಸ್: ಟಿಬೆಟಿಯನ್ ನಾಯಕ ದಲೈ ಲಾಮಾ ಅವರಿಗೆ ಸಂಬಂಧಪಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆಗೆ ಮುತ್ತಿಟ್ಟು ನೆಕ್ಕುವಂತೆ ಸೂಚಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವೀಡಿಯೋದಲ್ಲಿ ಬಾಲಕನೊಬ್ಬ ದಲೈಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ನಂತರ ದಲೈಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸಿ, ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ಸಂದರ್ಭದಲ್ಲಿ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡು ಬಂದಿದೆ.
ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದ್ದೇ ತಡ. ಎಲ್ಲೆಡೆ ಬೌದ್ಧ ಧರ್ಮ ಗುರುವಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಪ್ರಾಪ್ತ ಬಾಲಕನೊಂದಿಗೆ ದಲೈ ಲಾಮಾ ವರ್ತಿಸಿರುವ ರೀತಿ ನೆಟ್ಟಿಗರು ಅಸಹ್ಯಕರ ಎಂದು ಕರೆದಿದ್ದಾರೆ.
ದಲೈಲಾಮಾ ಈ ಹಿಂದೆಯೂ ಹಲವು ಬಾರಿ ಟೀಕೆಗೆ ಒಳಗಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಿದ್ದರೆ ಅವರು ಅತ್ಯಂತ ಆಕರ್ಷಕವಾಗಿರಬೇಕು ಎಂದು ಹೇಳಿ ವಿವಾದವನ್ನು ಎಳೆದುಕೊಂಡಿದ್ದರು. ಈ ಹೇಳಿಕೆಯಿಂದ ಅವರು ವಿಶ್ವದಾದ್ಯಂತ ಭಾರೀ ಟೀಕೆಗೆ ಒಳಗಾಗಿದ್ದರು.