ಜೈಪುರ: ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆ ಕೆಲಸ ಸದ್ಯಕ್ಕಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಶತಕ ಬಾರಿಸಿ ಮುನ್ನುಗ್ಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿವೆ. ಒಂದೆಡೆ ಜನಸಾಮಾನ್ಯರು ಕಂಗಾಲಾಗಿ ಹೋಗಿದ್ದಾರೆ. ದೇಶದಾದ್ಯಂತ ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಸಾರಿಗೆ ವಲಯ ನಷ್ಟ ಅನುಭವಿಸುತ್ತಿದೆ. ಇದರಿಂದಾಗಿ ಸರಕುಗಳ ಬೆಲೆಯೂ ಏರುತ್ತಿದೆ. ಇದರಿಂದ ಕಂಗಾಲಾಗಿರುವ ಗ್ರಾಹಕರು ಇಂಧನ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದರು. ಆದರೆ, ಸದ್ಯದಲ್ಲಿ ಇಳಿಕೆ ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನುವುದು ಸರಕಾರದ ಗಮನದಲ್ಲಿದೆ. ಆದರೆ ಬೆಲೆ ಏರಿಕೆ ಅನಿವಾರ್ಯ. ಸದ್ಯಕ್ಕೆ ಬೆಲೆ ಇಳಿಕೆ ಮಾಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಇಂಧನ ದ ಮೇಲಿನ ತೆರಿಗೆ ಹಣ ಕೋವಿಡ್ ಸಂದರ್ಭದಲ್ಲಿ ಜನಕಲ್ಯಾಣಕ್ಕಾಗಿಯೇ ಬಳಕೆಯಾಗುತ್ತಿದೆ. ಕೋವಿಡ್ ನಿಗ್ರಹ ಯೋಜನೆಗಳಿಗೆ ಸರ್ಕಾರಕ್ಕೆ ಸಂಪನ್ಮೂಲದ ಅಗತ್ಯವಿದೆ ಎಂದು ಜೈಪುರದಲ್ಲಿ ಸುದ್ದಿಗಾರರೊಂದಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.