ಸಮಗ್ರ ನ್ಯೂಸ್: ಚುನಾವಣೆ ಘೋಷಣೆಯಾದ ನಂತರ ರಾಜ್ಯದ ಹಲವು ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡುವ ಕೆಲಸವನ್ನು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಮಾಡುತ್ತಿದ್ದು, ಈ ವೇಳೆ ಇಬ್ಬರು ಖತರ್ನಾಕ್ ವ್ಯಕ್ತಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ.
ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ತಡೆದು ತಪಾಸಣೆ ನಡೆಸಿದಾಗ ಆತನ ಸೊಂಟದಲ್ಲಿ 7.5 ಲಕ್ಷ ರೂಪಾಯಿ ಪತ್ತೆಯಾಗಿದೆ.
ಬೈಕ್‍ನಲ್ಲಿ ತೆರಳುತ್ತಿದ್ದ ಸೈಫುಲ್ಲಾ ಮತ್ತು ಕುಮಾರ್ ಬಳಿ ಹಣ ಪತ್ತೆಯಾಗಿದೆ. ಸೈಫುಲ್ಲಾ ಮತ್ತು ಕುಮಾರ್ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದವರು ಎನ್ನಲಾಗಿದೆ. ತಪಾಸಣೆ ಬಳಿಕ ಅಧಿಕಾರಿಗಳು ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದ ಸೈಫುಲ್ಲಾ ಮತ್ತು ಕುಮಾರ್ ಇಬ್ಬರು ತಡಬಡಾಯಿಸಿಕೊಂಡು ದಾವಣಗೆರೆಯಿಂದ ಬಂದಿದ್ದು, ಹೊನ್ನಾಳಿಯಿಂದ ಬಂದಿದ್ದು ಎಂದು ಗೊಂದಲ ಸೃಷ್ಟಿ ಮಾಡಿದ್ದಾರೆ.
ಈ ವೇಳೆ ಅನುಮಾನಕ್ಕೊಳಗಾದ ಚೆಕ್ ಪೋಸ್ಟ್ ಅಧಿಕಾರಿಗಳು, ಪೋಲಿಸರು ಹಣ ವಶಕ್ಕೆ ಪಡೆದು ಸೂಕ್ತ ದಾಖಲೆ ನೀಡುವಂತೆ ಹೇಳಿದರು. ಬುಧವಾರ ತಡರಾತ್ರಿ 12 ಗಂಟೆ ಸರಿಸುಮಾರು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್ ಬಳಿ ಕಳೆದ ದಿನ ನಡೆದಿದ್ದು, ಇದು ದಾವಣಗೆರೆ ಜಿಲ್ಲೆಯ ಮೊದಲ ದಾಖಲೆ ಇಲ್ಲದ ಹಣ ಸೀಜ್ ಮಾಡಿರುವುದಾಗಿ ಚೆಕ್ ಪೋಸ್ಟ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.