ಸಮಗ್ರ ನ್ಯೂಸ್: ನಂದಿನಿ ಬ್ರಾಂಡ್ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಮಾಡುತ್ತಿರುವ ಕೆಎಂಎಫ್ ಗೆ ಸೆಡ್ಡು ಹೊಡೆಯಲು ಗುಜರಾತ್ ಮೂಲದ ಅಮುಲ್ ಮುಂದಾಗಿದೆ.
ಆನ್ಲೈನ್ ಮೂಲಕ ಹಾಲು, ಮೊಸರು ವಿತರಣೆಗೆ ಗುಜಾರಾತ್ ನ ಅಮೂಲ್ ಸಜ್ಜಾಗಿದೆ.
ಇದರ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಸೇವ್ ನಂದಿನಿ ಅಭಿಯಾನ ಆರಂಭಿಸಿದ್ದಾರೆ. ಗೋ ಬ್ಯಾಕ್ ಅಮುಲ್ ಅಭಿಯಾನ ಆರಂಭಿಸಿರುವ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಾಯ್ಕಾಟ್ ಅಮುಲ್ ಸೇವ್ ನಂದಿನಿ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ಆರಂಭಿಸಲಾಗಿದೆ. ಅಮುಲ್ ಕನ್ನಡ ಎಂಬ ಟ್ವಿಟರ್ ಖಾತೆಯಲ್ಲಿ ಹಾಲು ಮತ್ತು ಮೊಸರಿನ ರೂಪದಲ್ಲಿ ಅಮುಲ್ ಹೊಸ ತಾಜಾತನ ತರುತ್ತದೆ. ಆರ್ಡರ್ ಮಾಡಿದರೆ ಶೀಘ್ರದಲ್ಲೇ ನಿಮ್ಮ ಮನೆ ಬಾಗಿಲಿಗೆ ತಾಜಾ ಹಾಲು ಮತ್ತು ಮೊಸರು ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಉದ್ಘಾಟನೆ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಎಂಎಫ್ ಮತ್ತು ಅಮುಲ್ ಜೊತೆಯಾಗಿ ಸಾಗಿದರೆ ಸಹಕಾರ ಕ್ಷೇತ್ರದಲ್ಲಿ ಅದ್ಭುತ ಸಾಧಿಸಬಹುದು ಎಂದು ಹೇಳಿದ್ದರು. ಇದು ಕೆಎಂಎಫ್ ಮತ್ತು ಅಮುಲ್ ವಿಲೀನಗೊಳಿಸುವ ಹುನ್ನಾರ ಎಂದು ಹೇಳಲಾಗಿತ್ತು. ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ರಾಜ್ಯ ಬಿಜೆಪಿ ನಾಯಕರು, ಕೆಎಂಎಫ್ ಮತ್ತು ಅಮುಲ್ ವಿಲೀನ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ಅಮುಲ್ ಅಲಿಖಿತ ನಿಯಮ ಮುರಿದು ಹಾಲು ಮಾರಾಟಕ್ಕೆ ಮುಂದಾಗಿದೆ.
ಕೆಎಂಎಫ್ ಅಧಿಕಾರಿಗಳು ಮುಕ್ತ ಮಾರುಕಟ್ಟೆಯಲ್ಲಿ ಹಾಲಿನ ಉತ್ಪನ್ನಗಳನ್ನು ಯಾರು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಹಾಲು ಮೊಸರು ಮಾರುಕಟ್ಟೆಯಲ್ಲಿ ನಂದಿನಿ ಶೇಕಡ 70ರಷ್ಟು ಪಾಲು ಹೊಂದಿದೆ. ಯಾವುದೇ ಆತಂಕ ಬೇಡ ಎಂದು ಹೇಳಿದ್ದಾರೆ. ಆದರೆ, ಜಾಲತಾಣಗಳಲ್ಲಿ ಅಮುಲ್ ವಿರುದ್ಧ ಅಭಿಯಾನ ಹೆಚ್ಚಾಗಿದೆ.