ಮಿಜೋರಾಮ್: ಭಾರತದ ಸಣ್ಣ ರಾಜ್ಯದಲ್ಲಿ ವಿಶ್ವದಲ್ಲೇ ದೊಡ್ಡ ಕುಟುಂಬ ಹೊಂದಿದ್ದ ವ್ಯಕ್ತಿಯೊಬ್ಬರು ನಿಧನರಾಗಿದ್ದಾರೆ. 38 ಪತ್ನಿಯರಿಗೆ ನಲ್ಮೆಯ ಪತಿಯಾಗಿ, 89 ಮಕ್ಕಳಿಗೆ ಪ್ರೀತಿಯ ಅಪ್ಪನಾಗಿ ಮತ್ತು 33 ಮೊಮ್ಮಕ್ಕಳಿಗೆ ಮುದ್ದಿನ ಅಜ್ಜನಾಗಿದ್ದ ಮಿಜೋರಾಮ್ ನ ಜಿಯೋನಾ ಚಾನಾ (76 ವ.) ಅವರು ಇಹಲೋಕ ತ್ಯಾಜಿಸಿದ್ದಾರೆ.
ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನಾ ನಿಧನಕ್ಕೆ ಮಿಜೋರಾಂ ಮುಖ್ಯಮಂತ್ರಿ ಜೊರಾಮ್ತಂಗ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚಾನಾ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಬೃಹತ್ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ. ರಾಜ್ಯ ಮತ್ತು ಚಾನಾ ಅವರ ಬಕ್ತಾಂಗ್ ತ್ಲಾಂಗ್ನುವಾಮ್ ಗ್ರಾಮವು ಇವರ ಕುಟುಂಬದಿಂದಾಗಿ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ ಎಂದಿದ್ದಾರೆ.
ಚಾನಾ ಅವರು 1945ರ ಜುಲೈ 21 ರಂದು ಜನಿಸಿದ್ದರು. ಕಳೆದ ಕೆಲವು ಸಮಯದಿಂದ ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಬಳಲುತ್ತಿದ್ದ ಜಿಯೋನಾ ನಿನ್ನೆ ಮಧ್ಯಾಹ್ನ 3 ಗಂಟೆಗೆ ಐಜಾಲ್‌ನ ಟ್ರಿನಿಟಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಸ್ವ ಗ್ರಾಮದಲ್ಲಿ ‘ಚಾನಾ ಪಂಥ’ ಎಂಬ ಧಾರ್ಮಿಕ ಸಮುದಾಯದ ಮುಖ್ಯಸ್ಥರಾಗಿದ್ದರು. 17ನೇ ವಯಸ್ಸಿನಲ್ಲಿ ಅವರು, ಅವರಿಗಿಂತ ಮೂರು ವರ್ಷ ಹಿರಿಯರಾದ ತಮ್ಮ ಮೊದಲ ಹೆಂಡತಿಯನ್ನು ಮದುವೆಯಾಗಿದ್ದರು. ಅವರ ಬೃಹತ್ ಕುಟುಂಬದ ಸದಸ್ಯರು ಮಿಜೋರಾಮ್ ನ ಸುಂದರ ಪರ್ವತ ಶ್ರೇಣಿಗಳಿಂದ ಕೂಡಿದ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ‘ಚುವಾನ್ ಥಾರ್ ರನ್’ ಅಥವಾ ನ್ಯೂ ಜನರೇಷನ್ ಹೋಮ್ ಎಂಬ ಹೆಸರಿನ ಮನೆಯು 100 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿದೆ. ಜಿಯೋನಾ ಚಾನಾ ಅವರ ಪುತ್ರರು ಮತ್ತು ಅವರ ಹೆಂಡತಿಯರು ಮತ್ತು ಅವರ ಎಲ್ಲಾ ಮಕ್ಕಳು ಒಂದೇ ಕಟ್ಟಡದಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಒಂದೇ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಾರೆ.