ಸಮಗ್ರ ನ್ಯೂಸ್: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಸಕ್ತ ಐಪಿಎಲ್ ನ ಬಹು ನಿರೀಕ್ಷಿತ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ಎದುರು 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 172 ರನ್ ಗುರಿ ಮುಂದಿಟ್ಟಿತು. ಗುರಿ ಬೆನ್ನಟ್ಟಿದ ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಅವರ ಭರ್ಜರಿ ಜೊತೆಯಾಟಕ್ಕೆ ಸಾಕ್ಷಿಯಾಯಿತು. ಪ್ಲೆಸಿಸ್ 43 ಎಸೆತಗಳಲ್ಲಿ 73 ರನ್ ಗಳಿಸಿ ಔಟಾದರು. ಈ ಐಪಿಎಲ್ ಋತುವಿನ ಮೊದಲ 100 ರನ್ ಪಾಲುದಾರಿಕೆಯನ್ನು ಕೊಹ್ಲಿ ಮತ್ತು ಪ್ಲೆಸಿಸ್ ಆಟವಾಡಿದರು. ದಿನೇಶ್ ಕಾರ್ತಿಕ್ ಶೂನ್ಯಕ್ಕೆ ನಿರ್ಗಮಿಸಿದರು.
ಭರ್ಜರಿ ಆಟವಾಡಿ ಕಿಕ್ಕಿರಿದು ಸೇರಿದ ಅಭಿಮಾನಿಗಳಿಗೆ ಭರ್ಜರಿ ಭಾನುವಾರದ ಮಜಾ ನೀಡಿದ ವಿರಾಟ್ ಕೊಹ್ಲಿ ಔಟಾಗದೆ 82 ರನ್ ಗಳಿಸಿದರು. 49 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಗಳನ್ನ ಸಿಡಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 12 ರನ್ ಗಳಿಸಿದರು. 16.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 172 ರನ್ ಗುರಿ ಮುಟ್ಟಿ ಜಯದ ಕೇಕೆ ಹಾಕಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ರನ್ ಆಗುವಷ್ಟರಲ್ಲಿ ಮೊದಲ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ರೋಹಿತ್ ಶರ್ಮಾ 10 ಎಸೆತಗಳಲ್ಲಿ 1 ರನ್ ಗಳಿಸಿ ಹೀನಾಯ ನಿರ್ವಹಣೆ ತೋರಿ ಔಟಾದರು. ಇಶಾನ್ ಕಿಶನ್ 10 ರನ್ , ಕ್ಯಾಮರೂನ್ ಗ್ರೀನ್ 5 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ ಕೂಡ 15 ರನ್ ಗಳಿಸಿ ನಿರ್ಗಮಿಸಿದರು. ಆ ಬಳಿಕ ಬಂದ ಎಡಗೈ ಬ್ಯಾಟ್ಸ್ ಮ್ಯಾನ್ ತಿಲಕ್ ವರ್ಮ ನೆಲಕಚ್ಚಿ ಆಟವಾಡಿ ತಂಡಕ್ಕೆ ಆಧಾರವಾದರು. ದಿಗ್ಗಜರು ವಿಫಲರಾದರು ಮುಂಬೈ ಗೌರವಯುತ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಔಟಾಗದೆ 84 ರನ್ ಗಳಿಸಿದರು. 46 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಆಕರ್ಷಕ ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿದ್ದವು.
ಮುಂಬೈ ಅಲ್ಪ ಮೊತ್ತಕ್ಕೆ ಕುಸಿಯುತ್ತದೆ ಎಂಬ ಆರ್ ಸಿಬಿ ಅಭಿಮಾನಿಗಳ ನಿರೀಕ್ಷೆ ಹುಸಿ ಮಾಡಿದರು. ನೆಹಾಲ್ ವಧೇರಾ 21 ರನ್ ಗಳಿಸಿದರು. ಅರ್ಷದ್ ಖಾನ್ ಔಟಾಗದೆ 15 ರನ್ ಗಳಿಸಿದರು. 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. 20 ರ ಹರೆಯದ ಹೈದರಾಬಾದ್ ಮೂಲದ ಆಟಗಾರ ತಿಲಕ್ ವರ್ಮ ಹೊಸ ಭರವಸೆ ಮೂಡಿಸಿದರು.