ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಚುನಾವಣೆಗೆ ಮೇ. ೧೦ಕ್ಕೆ ದಿನಾಂಕ ಘೋಷಣೆ ಆಗಿದೆ. ಅಂದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ರಜೆ ಸಿಗಲಿದೆ. ನೌಕರರಿಗೆ ರಜೆ ನೀಡಬೇಕು ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ನಿರ್ದೇಶನ ನೀಡಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಭಾರತೀಯ ಚುನಾವಣಾ ಆಯೋಗವು (ECI) ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ.
ಈ ಮತದಾನ ನಡೆಯುವ ದಿನವಾದ ಮೇ 10ರಂದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ರಜೆ ನೀಡುವಂತೆ ಭಾರತೀಯ ಚುನಾವಣೆ ಆಯೋಗ ಸೂಚಿಸಿದೆ. ಅಲ್ಲದೇ ಅಂದು ಈ ಎರಡು ವಲಯಗಳ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಚುನಾವಣೆ ಆಯೋಗ ಹೊರಡಿಸಿರುವ ಪತ್ರದಲ್ಲಿ, ಉದ್ಯೋಗಿಗಳಿಗೆ ರಜೆ ನೀಡುವ ನಿಟ್ಟಿನಲ್ಲಿ ‘ಪ್ರಜಾಪ್ರತಿನಿಧಿ ಕಾಯಿದೆ 1951 ಸೆಕ್ಷನ್ 135B’ ಅನ್ನು ಉಲ್ಲೇಖಿಸಿದೆ. ಇದರಡಿ ಉದ್ಯೋಗಿಗಳು ಮತದಾನ ದಿನದಂದು ರಜೆಗೆ ಅರ್ಹರಾಗಿರುತ್ತಾರೆ. ಕಾಯಿದೆ ನಿಯಮದ ಪ್ರಕಾರ ಮತದಾನದ ದಿನ ಮೇ 10ರಂದು ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ ನೀಡಬೇಕೆಂದು ಆಯೋಗ ತಿಳಿಸಿದೆ.
ಕಾಯಿದೆಯಡಿ ತಿಳಿಸಲಾದ ನಿಬಂಧನೆಗಳನ್ನು ಒಂದು ವೇಳೆ ಉಲ್ಲಂಘಿಸಿದರೆ ಅಂದರೆ ಮತದಾನದ ದಿನ ಉದ್ಯೋಗಿಗಳಿಗೆ ರಜೆ ನೀಡದ ಹೋದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಆಯೋಗ ಹೇಳಿದೆ. ಈ ಮೂಲಕ ಎಲ್ಲ ಮತದಾರರನ್ನು ಅಂದು ಸಾರ್ವತ್ರಿಕ ಮತದಾನದಲ್ಲಿ ಪಾಳ್ಗೊಳ್ಳುವಂತೆ ಉತ್ತೇಜಿಸಬೇಕು ಎಂದು ಆಯೋಗ ಕೋರಿದೆ.