ಸಮಗ್ರ ನ್ಯೂಸ್: ಹೋಳಿ ಆಚರಣೆಯ ‘ರಂಗ್ದ ಬರ್ಸ’ ಕಾರ್ಯಕ್ರಮದ ಮೇಲೆ ಭಜರಂಗದಳದ ಕಾರ್ಯಕರ್ತರ ದಾಳಿಯನ್ನು ಕಾರ್ಯಕ್ರಮ ಆಯೋಜಕರು ಖಂಡಿಸಿದ್ದು, ಕಾರ್ಯಕ್ರವನ್ನು ಹಿಂದೂಗಳೇ ಆಯೋಜನೆ ಮಾಡಿರುವುದು ಅಲ್ಲದೆ ಪೊಲೀಸ್ ಇಲಾಖೆಯ ಅಧಿಕೃತ ಅನುಮತಿ ಇದ್ದರೂ ಕಿಡಿಗೇಡಿಗಳು ದಾಳಿ ನಡೆಸಿದ್ದು, ಅಂತವರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಕಾರ್ಯಕ್ರಮ ಸಂಘಟಕ ಜೀವನ್ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಭಾನುವಾರ ಮರೋಳಿ ಸೂರ್ಯವುಡ್ಸ್ ಗ್ರೌಂಡ್ಸ್ನಲ್ಲಿ ಆಯೋಜಿಸಲಾಗಿದ್ದ ‘ರಂಗ್ದ ಬರ್ಸ’ ಕಾರ್ಯಕ್ರಮವನ್ನು ಗೆಳೆಯರ ಸಹಭಾಗಿತ್ವದಲ್ಲಿ ಕಳೆದ 6 ವರ್ಷಗಳಿಂದ ನಾವು ಈ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿಯೂ ಪೊಲೀಸ್ ಇಲಾಖೆ ಅನುಮತಿ ಪಡೆದುಕೊಂಡು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೆವು.
ಇದನ್ನು ಹಿಂದೂಗಳೇ ಆಯೋಜನೆ ಮಾಡಿರುವುದು. ಇದು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ ಮಕ್ಕಳಿಂದ ಹಿಡಿದು ಕುಟುಂಬವರ್ಗದವರಿಗೆ ಇದ್ದ ಕಾರ್ಯಕ್ರಮವಾಗಿತ್ತು ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಅವರಿಗೆ ನಿಲ್ಲಿಸಬೇಕೆಂದರೆ ಮೊದಲೇ ನಮ್ಮನ್ನು ಸಂಪರ್ಕಿಸಬಹುದಿತ್ತು. ಅಥವಾ ಕಾನೂನತ್ಮಕವಾಗಿ ನಿಲ್ಲಿಸಬಹುದಿತ್ತು. ಅದನ್ನು ಬಿಟ್ಟು ಏಕಾಏಕಿ ನುಗ್ಗಿ ಹಲ್ಲೆ ಮಾಡಿ ಕಾರ್ಯಕ್ರಮವನ್ನು ನಿಲ್ಲಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಯಾರನ್ನೂ ಬಲವಂತವಾಗಿ ಕಾರ್ಯಕ್ರಮಕ್ಕೆ ಕರೆಯದೇ ಮೊದಲೇ ಆಹ್ವಾನ ನೀಡಲಾಗಿತ್ತು. ಒಂದು ತಿಂಗಳಿನಿಂದ ಪ್ರಚಾರವನ್ನೂ ಮಾಡಿದ್ದೆವು. ಇದರಿಂದ ನಮಗೆ 5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದರು.