ಸಮಗ್ರ ನ್ಯೂಸ್: ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ಆರಂಭವಾಗದಿದ್ದರೆ ಅಡ್ತಲೆ ವಾರ್ಡ್ ವ್ಯಾಪ್ತಿಯಲ್ಲಿ ಮಾ.23ರಿಂದ ನೋಟ ಅಭಿಯಾನದ ಜಾಗೃತಿಯ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ಆರಂಭಗೊಂಡಿದೆ.
ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆ ಹೋರಾಟ ನಡೆಸುತ್ತಾ ಬಂದಿದ್ದು ಅದರ ಪರಿಣಾಮ ಆರಂಭದಲ್ಲಿ ರೂ.1 ಕೋಟಿ ಅನುದಾನ ಬಿಡುಗಡೆ ಗೊಂಡು ಅರಂತೋಡಿನಿಂದ ಅಡ್ತಲೆ ರಸ್ತೆಯ 1357 ಮೀಟರ್ ಕಾಮಗಾರಿ ನಡೆದಿದೆ. ಆದಾದ ಬಳಿಕ ಕಾಮಗಾರಿ ನಿಲ್ಲಿಸಲಾಗಿತ್ತು. ಆದರೆ ಮುಂದಿನ ಕಾಮಗಾರಿಗೆ ರೂ.2 ಕೋಟಿ ಅನುದಾನ ಇದೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದರು. ಆದರೆ ರಸ್ತೆ ಕಾಮಗಾರಿ ನಿಲ್ಲಿಸಿದ್ದರಿಂದ ಅಸಮಾಧಾನ ಗೊಂಡ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮಾ.23 ರೊಳಗೆ ಕಾಮಗಾರಿ ಆರಂಭಿಸದಿದ್ದರೆ ವಾರ್ಡ್ ವ್ಯಾಪ್ತಿಯಲ್ಲಿ ನೋಟಾ ಅಭಿಯಾನದ ಜಾಗೃತಿ ನಡೆಸುವ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಹಿನ್ನಲೆಯ ಪರಿಣಾಮ ಇಂದಿನಿಂದ ಅಡ್ತಲೆ ರಸ್ತೆ ಕಾಮಗಾರಿ ಆರಂಭವಾಗಿದ್ದು, ಬೆಳಗ್ಗೆ ಜೆಸಿಬಿ ಬಂದು ರಸ್ತೆ ಅಗೆಯಲು ಆರಂಭಿಸಿದೆ.
ಮುಂಬರುವ ಚುನಾವಣೆಗೆ ಮೊದಲು ಅಡ್ತಲೆ ತನಕ ರಸ್ತೆ ಅಭಿವೃದ್ಧಿ ಆಗದಿದ್ದಲ್ಲಿ ಅಥವಾ ಆಗುವಂತ ಸನ್ನಿವೇಶಗಳು ಕಂಡುಬರದೇ ಇದ್ದಲ್ಲಿ ವೇದಿಕೆಯ ನೇತೃತ್ವದಲ್ಲಿ ಊರಿನ ಮಹಾಜನತೆಯ ಹಾಗೂ ರಸ್ತೆ ಫಲಾನುಭವಿಗಳ ಸಭೆ ಕರೆದು, ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ತಿಳಿಸಿದ್ದಾರೆ.