ಸಮಗ್ರ ನ್ಯೂಸ್: ರಾಜ್ಯ ರಾಜಕಾರಣಕ್ಕೆ ಚಿತ್ರನಟಿ ರಮ್ಯಾ (ದಿವ್ಯ ಸ್ಪಂದನಾ) ರಿ ಎಂಟ್ರಿ ಕೊಡಲಿದ್ದಾರೆ. ಬೆಂಗಳೂರಿನ ಪದ್ಮನಾಭನಗರ ಅಥವಾ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಎರಡು ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಮ್ಯಾ ಕರೆ ತರಲು ಪ್ರಯತ್ನ ಮಾಡಲಾಗಿದೆ. ಪದ್ಮನಾಭನಗರ , ಚನ್ನಪಟ್ಟಣ ಕ್ಷೇತ್ರದ ಲೆಕ್ಕಾಚಾರ ಮಾಡಿರುವ ಕಾಂಗ್ರೆಸ್ ನಾಯಕರು, ಪ್ರಮುಖ ಒಕ್ಕಲಿಗ ಸಮೂದಾಯದ ಮತಸೆಳೆಯಲು ಪ್ಲಾನ್ ರೂಪಿಸಿದ್ದಾರೆ.
ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಮಧ್ಯದಲ್ಲಿ ಪೈಪೋಟಿ ಇದೆ. ಇನ್ನು ಇಲ್ಲಿ ನಾಯ್ಡು ಸಮುದಾಯದ ವ್ಯಕ್ತಿ ಅಭ್ಯರ್ಥಿಯಾದರೆ ಒಕ್ಕಲಿಗ ಮತ ಸೆಳೆಯಲು ಕಷ್ಟವಾಗಲಿದೆ. ಆದ್ದರಿಂದ ಒಕ್ಕಲಿಗ ಮತ್ತು ಅಹಿಂದ ಮತ ಲೆಕ್ಕಾಚಾರದಲ್ಲಿ ರಮ್ಯಾ ಸೂಕ್ತ ಅನ್ನೋ ಮಾತು ಕೇಳಿಬರುತ್ತಿದೆ. ಆದ್ದರಿಂದ ರಮ್ಯಾ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ಜೊತೆಗೆ ಸಚಿವ ಆರ್.ಅಶೋಕ ವಿರೋಧಿ ಮತಗಳ ಕ್ರೋಢಿಕರಣದ ಲೆಕ್ಕಾಚಾರ ಮಾಡಲಾಗಿದೆ.
ಪದ್ಮನಾಭನಗರ ಕ್ಷೇತ್ರ ಹೊರತುಪಡಿಸಿದರೆ ಚನ್ನಪಟ್ಟಣ ಕ್ಷೇತ್ರದತ್ತ ದೃಷ್ಟಿ ಹರಿಸಲಾಗಿದೆ. ರಮ್ಯಾ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇನ್ನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಠಕ್ಕರ್ ಕೊಡಲು ಹಾಗೂ ಒಕ್ಕಲಿಗ ಮತಗಳನ್ನು ಸೆಳೆಯಲು ರಮ್ಯಾ ಅವರನ್ನು ಸ್ಪರ್ಧೆಗಿಳಿಸಲು ಚಿಂತನೆ ಮಾಡಲಾಗಿದೆ.