ಸಮಗ್ರ ನ್ಯೂಸ್: ಕಡಬ ತಾಲೂಕಿನಲ್ಲಿ ಕಾಡು ಪ್ರಾಣಿಗಳ ಉಪಟಳ ಜೋರಾಗಿದೆ. ಇತ್ತೀಚೆಗಷ್ಟೇ ರೆಂಜಿಲಾಡಿಯಲ್ಲಿ ಇಬ್ಬರನ್ನು ಕಾಡಾನೆ ಬಲಿತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಕಾಡಾನೆಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು, ಕೃಷಿ ಭೂಮಿಯನ್ನು ನಾಶ ಪಡಿಸುತ್ತಿದೆ. ಇದರಿಂದ ಸ್ಥಳೀಯರು ತೀವ್ರ ಆತಂಕದಲ್ಲಿದ್ದು ಜೀವ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಬ್ರಹ್ಮಣ್ಯದಲ್ಲಿ ಚಿರತೆಯೊಂದು ಮನೆ ಗೇಟ್ ಬಳಿ ಆಟವಾಡಿಕೊಂಡಿದ್ದ ನಾಯಿಯನ್ನು ಹೊತ್ತೊಯ್ದ ಘಟನೆ ವರದಿಯಾಗಿತ್ತು. ಇದೀಗ ಆಡೊಂದನ್ನು ಚಿರತೆ ಬೇಟೆಯಾಡಿ ದೇಹವನ್ನು ಅರ್ಧಂಬರ್ಧ ತಿಂದು ತೇಗಿ ಮರದ ಗೆಲ್ಲಿಗೆ ನೇತು ಹಾಕಿರುವ ಘಟನೆ ಕಡಬ ಸಮೀಪದ ಬೆತ್ತೋಡಿಯಲ್ಲಿ ನಡೆದಿದೆ.
ತಾಲೂಕಿನ ಬೆತ್ತೋಡಿ ಕಾಲನಿಯ ಕೆ ಎಫ್ ಡಿ ಸಿ ನಿಗಮದ ರಬ್ಬರ್ ತೋಟದಲ್ಲಿ ಈ ದೃಶ್ಯ ಕಂಡು ಬಂದಿದ್ದು ರಬ್ಬರ್ ಟ್ಯಾಂಪಿಂಗ್ ಗೆ ಬಂದ ವ್ಯಕ್ತಿಯೊಬ್ಬರು ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಚಿದ್ದಾರೆ. ಆಡಿನ ಮೃತ ದೇಹದ ಕೆಲ ಭಾಗಗಳನ್ನು ಚಿರತೆ ತಿಂದು ಹಾಕಿದೆ. ಬೆತ್ತೋಡಿ ಕಾಲನಿಯ ಸುಮಾರು ಐನೂರು ಮೀಟರ್ ವ್ಯಾಪ್ತಿಯಲ್ಲಿ ಚಿರತೆ ಓಡಾಟ ನಡೆಸಿದ ಹೆಜ್ಜೆ ಗುರುತುಗಳಿವೆಯೆಂದು ಸ್ಥಳೀಯರು ಹೇಳಿದ್ದಾರೆ.ಇದರಿಂದ ಆ ಭಾಗದ ಸ್ಥಳೀಯರು ಆತಂಕಗೊಂಡಿದ್ದು, ಚಿರತೆಯನ್ನು ಕೂಡಲೇ ಹಿಡಿಯುವಂತೆ ಆಗ್ರಹಿಸಿದ್ದಾರೆ.