ಸಮಗ್ರ ನ್ಯೂಸ್: ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು, ಹಾಗಾಗಿ ರಕ್ತದಾನ ಮಾಡುವುದಕ್ಕೂ ವೈದ್ಯಕೀಯ ಮಾರ್ಗಸೂಚಿಯಿರುತ್ತೆ. ಇಂತಹವರು ರಕ್ತದಾನ ಮಾಡಬೇಕು, ಮಾಡಬಾರದು ಎಂಬ ನಿಯಮವಿದೆ. ಯಾವುದೇ ದಾನ ಇನ್ನೊಬ್ಬರ ಜೀವಕ್ಕೆ ಆಸರೆಯಾಗಬೇಕೇ ಹೊರತು ಕೆಡುಕುಂಟು ಮಾಡಬಾರದು. ಹೀಗಾಗಿ ರಕ್ತದಾನ ಮಾಡುವಾಗ ವೈದ್ಯಕೀಯ ನಿಯಮ ಪಾಲಿಸುವುದು ತುಂಬಾ ಮುಖ್ಯ. ಆ ಮಾರ್ಗಸೂಚಿಯೇನು? ಅದನ್ನು ಯಾಕೆ ಪಾಲಿಸಬೇಕು? ಯಾರ‍್ಯಾರು ರಕ್ತದಾನ ಮಾಡಬಾರದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಮಾರಕ ಕಾಯಿಲೆಗಳ ವಿಚಾರವಾಗಿ ವೈದ್ಯಕೀಯ ಕ್ಷೇತ್ರ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ರಕ್ತದಾನದ ವಿಚಾರದಲ್ಲೂ ಇಂತಹ ಕ್ರಮಕೈಗೊಂಡಿರುವ ವಿಚಾರವನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ (Supreme Court) ಮುಂದಿಟ್ಟಿದೆ. ಸೋಂಕು ಹರಡುವಿಕೆ ನಿಯಂತ್ರಣ, ಇತರರ ಆರೋಗ್ಯದ ದೃಷ್ಟಿಯಿಂದ ಮಹಿಳಾ ಲೈಂಗಿಕ ಕಾರ್ಯಕರ್ತೆಯರು (Women Sex Workers) ರಕ್ತದಾನ ಮಾಡಬಾರದು ಎಂಬ ಮಾರ್ಗಸೂಚಿಯಿದೆ. ಈ ಸಾಲಿಗೆ ತೃತೀಯಲಿಂಗಿಗಳು (Transgenders) ಹಾಗೂ ಸಲಿಂಗಕಾಮಿಗಳನ್ನೂ (Gay) ಸೇರಿಸಲಾಗಿದೆ. ಯಾಕೆ ಇವರು ರಕ್ತದಾನ ಮಾಡುವಂತಿಲ್ಲ ಎಂಬುದಕ್ಕೆ ವೈದ್ಯಕೀಯ ಪುರಾವೆಗಳನ್ನೂ ಕೇಂದ್ರ, ಸುಪ್ರೀಂ ಮುಂದಿಟ್ಟಿದೆ. ಇದೇನು ಹೊಸ ಮಾರ್ಗಸೂಚಿಯಲ್ಲ. 2017ರಲ್ಲೇ ಈ ಮಾರ್ಗಸೂಚಿ ಹೊರಡಿಸಲಾಗಿತ್ತು. ಹಾಗಾದರೆ, ಈಗ ಏಕೆ ಈ ಬಗ್ಗೆ ಚರ್ಚೆಯಾಗುತ್ತಿದೆ ಎಂಬುದನ್ನು ತಿಳಿಯೋಣ.
ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡುವಂತಿಲ್ಲ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಅದರಲ್ಲಿ “ಲಿಂಗಪರಿವರ್ತಕರು, ಸಲಿಂಗಕಾಮಿಗಳು ಮತ್ತು ಮಹಿಳಾ ಲೈಂಗಿಕ ಕಾರ್ಯಕರ್ತರನ್ನು ಎಚ್‌ಐವಿ ʼಅಪಾಯಕಾರಿʼ ವರ್ಗಕ್ಕೆ ಸೇರಿಸಲಾಗಿದೆ. ಹೀಗಾಗಿ ಅವರನ್ನು ರಕ್ತದಾನಿಗಳ ವರ್ಗದಿಂದ ದೂರ ಇಡಲಾಗಿದೆ” ಎಂದು ಎಂದು ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ರಕ್ತ ವರ್ಗಾವಣೆ ಕೌನ್ಸಿಲ್ (NBTC) ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು 2017ರ ಅಕ್ಟೋಬರ್ 11 ರಂದು “ರಕ್ತದಾನಿ ಆಯ್ಕೆ ಮತ್ತು ರಕ್ತದಾನಿಗಳ ಮಾರ್ಗಸೂಚಿ” 12 ಮತ್ತು 51ನೇ ವಿಧಿ ಅಡಿಯಲ್ಲಿ ಸಲಿಂಗಕಾಮಿ ಮತ್ತು ತೃತೀಯಲಿಂಗಿಗಳು ರಕ್ತದಾನ ಮಾಡುವಂತಿಲ್ಲ ಎಂದಿದೆ. ಇದನ್ನು ವಿರೋಧಿಸಿ ತೃತೀಯಲಿಂಗಿ ಸಮುದಾಯದ ಥಂಗ್‌ಜಮ್ ಸಂತಾ ಸಿಂಗ್ ಎಂಬವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಮಾರ್ಗಸೂಚಿಗೆ ತಡೆ ನೀಡಬೇಕು ಎಂದು ಕೋರಿದ್ದರು. ಅದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
2017ರ ಮಾರ್ಗಸೂಚಿಗಳು ಏನು ಹೇಳುತ್ತವೆ?
ರಕ್ತ ವರ್ಗಾವಣೆ ವ್ಯವಸ್ಥೆಯು (ಬಿಟಿಎಸ್) ದೇಶದ ರಕ್ತದಾನ ವಿಧಾನವನ್ನು ಅವಲಂಬಿಸಿದೆ. ದೇಶದಾದ್ಯಂತ ಗುಣಮಟ್ಟದ ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿ ಇರಿಸಿಕೊಂಡು ನಿಯಮಾವಳಿಗಳನ್ನು ರೂಪಿಸಲಾಗಿದೆ. ಸುರಕ್ಷಿತ ರಕ್ತ ಹಾಗೂ ಅದನ್ನು ಸಕಾಲದಲ್ಲಿ ದೊರೆಯುವಂತೆ ಮಾಡುವುದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಅತಿದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದೆ.
ಯಾಕೆ ರಕ್ತದಾನ ಮಾಡುವಂತಿಲ್ಲ?
ಮಾರ್ಗಸೂಚಿಗಳ 12 ನೇ ವಿಧಿಯು “ರಕ್ತ ದಾನಿಗಳ ಆಯ್ಕೆ ಮಾನದಂಡ”ದ ಅಡಿಯಲ್ಲಿ ಬರುತ್ತದೆ. ರಕ್ತ ಕೊಡುವ ದಾನಿ ಕಾಯಿಲೆಗಳಿಂದ ಮುಕ್ತವಾಗಿರಬೇಕು. ಮುಖ್ಯವಾಗಿ HIV, ಹೆಪಟೈಟಿಸ್ ಬಿ ಸೋಂಕಿತರು ರಕ್ತದಾನ ಮಾಡುವಂತಿಲ್ಲ ಎಂದಿದೆ. ಇದರಿಂದ ರಕ್ತ ಪಡೆಯುವವರೂ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ 15 ನೇ ವಿಧಿಯು ಸಲಿಂಗಕಾಮಿ ಮತ್ತು ತೃತೀಯಲಿಂಗಿಗಳು ಹಾಗೂ HIV ಸೋಂಕಿನ ಅಪಾಯದಲ್ಲಿರುವವರನ್ನು ರಕ್ತದಾನದಿಂದ ಶಾಶ್ವತವಾಗಿ ದೂರವಿಟ್ಟಿದೆ. ಪರ್ಮನೆಂಟ್ ಡೆಫರಲ್ ಎಂದರೆ ರಕ್ತದಾನ ಮಾಡಲು ಎಂದಿಗೂ ಅವರನ್ನು ಅನುಮತಿಸುವುದಿಲ್ಲ.
ಸುಪ್ರೀಂನಲ್ಲಿರುವ ಮನವಿ ಏನು?
ರಕ್ತದಾನ ವಿಚಾರ ಕುರಿತಂತೆ, ಮಣಿಪುರದ ಥಂಗ್‌ಜಮ್ ಸಂತಾ ಸಿಂಗ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, 2021ರ ಮಾ.5ರಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. 2017ರ ಮಾರ್ಗಸೂಚಿಯ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಮಾರ್ಗಸೂಚಿಯಲ್ಲಿ ಗುರುತಿಸಲಾಗಿರುವ ಈ ವರ್ಗದ ಜನರನ್ನು ಎಚ್‌ಐವಿ ಮತ್ತು ಏಡ್ಸ್‌ನ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿರುವ ವರ್ಗಕ್ಕೆ ಸೇರಿಸಿರುವುದು ಸಂವಿಧಾನದ 14, 15 ಹಾಗೂ 21ನೇ ವಿಧಿಯ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಲಿಂಗ ಹಾಗೂ ಲೈಂಗಿಕತೆ ಆಧಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ‘ನವತೇಜ್ ಜೋಹರ್’ ಮತ್ತು ‘ನಲ್ಸಾ’ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಈ ಮಾರ್ಗಸೂಚಿಗಳು ಉಲ್ಲಂಘಿಸುತ್ತವೆ ಎಂದು ಹೇಳಲಾಗಿತ್ತು.
ರಕ್ತದಾನದಿಂದ ಇವರನ್ನು ಹೊರಗಿಡುವುದಕ್ಕೆ ಸರ್ಕಾರದ ವಾದವೇನು?
ತೃತೀಯಲಿಂಗಿಗಳು, ಪುರುಷರ ಜತೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು (ಎಂಎಸ್ಎಂ) ಮತ್ತು ಲೈಂಗಿಕ ಕಾರ್ಯಕರ್ತೆಯರು ರಕ್ತದಾನ ಮಾಡುವುದನ್ನು ನಿರ್ಬಂಧಿಸಿರುವ 2017ರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಈ ಮಾರ್ಗಸೂಚಿಗಳು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದ್ದು, ತಜ್ಞರಿಂದ ಜಾಗತಿಕವಾಗಿ ಮಾನ್ಯತೆ ಪಡೆದಿವೆ ಎಂದು ತಿಳಿಸಿದೆ.