ಬೆಂಗಳೂರು: ರಾಜ್ಯದ ಪರಿಶಿಷ್ಟರ ಕಲ್ಯಾಣಕ್ಕಾಗಿ 26,005 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಅನುಮೋದನೆ ಬಾಕಿ ಇದೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಎರಡು ದಿನಗಳ ಕಾಲ ನಡೆದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ಪ್ರಸಕ್ತ 2021-22ನೇ ಸಾಲಿನಲ್ಲಿ ಎಸ್ಸಿಎಸ್ಟಿ ಮತ್ತು ಟಿಎಸ್ಪಿ ಯೋಜನೆಯಡಿ 26,005 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಪರಿಷತ್ ಸಭೆ ನಡೆಯಲಿದ್ದು, ಅನುಮೋದನೆ ದೊರೆಯಲಿದೆ ಎಂದು ತಿಳಿಸಿದ್ದಾರೆ. ರಾಜ್ಯ ಪರಿಷತ್ ಸಭೆಯಲ್ಲಿ ಮಂಡಿಸಲು ಕರಡು ಕ್ರಿಯಾಯೋಜನೆಯನ್ನು ತ್ವರಿತವಾಗಿ ತಯಾರಿಸುವಂತೆ ನೋಡಲ್ ಏಜೆನ್ಸಿಯಲ್ಲಿರುವ ವಿವಿಧ 35 ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ನೋಡಲ್ ಏಜೆನ್ಸಿಗಳ ಅಧ್ಯಕ್ಷರಾಗಿರುವ ಸಚಿವರು ಸೂಚಿಸಿದ್ದಾರೆ.